ಬೀದಿ ನಾಯಿಗಳ ಹಿಡಿದು ಆಶ್ರಯ ತಾಣಗಳಿಗೆ ಸೇರಿಸುವಂತೆ ಸುಪ್ರೀಂ ಆದೇಶ: ರಾಹುಲ್​ ಗಾಂಧಿ ಹೇಳಿದ್ದೇನು?| Rahul Gandhi

rahul gandhi
Published on

Rahul Gandhi: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎಲ್ಲಾ ಬೀದಿ ನಾಯಿಗಳನ್ನು ಆಶ್ರಯ ತಾಣಕ್ಕೆ ರವಾನಿಸುವಂತೆ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರವಾಗಿ ಟೀಕಿಸಿದ್ದಾರೆ.

ತಮ್ಮ ಎಕ್ಸ್​ ಖಾತೆಯಲ್ಲಿ ಮಂಗಳವಾರ (ಆಗಸ್ಟ್12) ಪೋಸ್ಟ್​​ ಹಂಚಿಕೊಂಡಿರುವ ವಿಪಕ್ಷ ನಾಯಕ, ಇದು ದಶಕಗಳ ಮಾನವೀಯ, ವೈಜ್ಞಾನಿಕ ಬೆಂಬಲಿತ ನೀತಿಯಿಂದ ಹಿಂದೆ ಸರಿದ ಹೆಜ್ಜೆ ಎಂದು ಕರೆದಿದ್ದು, ದೂರದೃಷ್ಟಿಯಿಲ್ಲದ ಕೆಲಸ ಎಂದಿದ್ದಾರೆ.

ಕ್ರಿಮಿನಾಶಕ, ವ್ಯಾಕ್ಸಿನೇಷನ್, ಆಶ್ರಯಗಳು ಮತ್ತು ಸಮುದಾಯ ಆರೈಕೆಯನ್ನು ಅಳವಡಿಸಿಕೊಳ್ಳುವಂತೆ ಒತ್ತಾಯಿಸಿದ ಅವರು, ಸಾರ್ವಜನಿಕ ಸುರಕ್ಷತೆ ಮತ್ತು ಪ್ರಾಣಿ ಕಲ್ಯಾಣವು ಜೊತೆಜೊತೆಯಾಗಿ ನಡೆಯುವುದನ್ನು ನಾವು ಖಚಿತಪಡಿಸಿಕೊಳ್ಳಬಹುದು ಎಂದು ಬರೆದಿದ್ದಾರೆ.

ಕೋರ್ಟ್​ ಸೂಚನೆ

ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್.ಮಹಾದೇವನ್ ಅವರ ದ್ವೀಸದಸ್ಯ ಪೀಠವು, ದೆಹಲಿ ಸರ್ಕಾರ, ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಮತ್ತು ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್‌ಡಿಎಂಸಿ) ಗೆ ಎಲ್ಲಾ ಪ್ರದೇಶಗಳಿಂದ ಬೀದಿ ನಾಯಿಗಳನ್ನು ಬೇಗನೆ ಹಿಡಿಯಲು ಪ್ರಾರಂಭಿಸಿ ಮತ್ತು ಅಗತ್ಯವಿದ್ದರೆ ಒಂದು ಪಡೆಯನ್ನು ರಚಿಸಿ ಎಂದು ಸೂಚನೆ (ಆ.11) ನೀಡಿತ್ತು.

ನ್ಯಾಯಾಲಯವು ಎಲ್ಲಾ ಪ್ರದೇಶಗಳನ್ನು ಬೀದಿ ನಾಯಿಗಳಿಂದ ಮುಕ್ತಗೊಳಿಸುವ ಅಗತ್ಯವನ್ನು ಮುಖ್ಯವಾಗಿ ಉಲ್ಲೇಖಿಸುತ್ತಾ, ಅಭಿಯಾನಕ್ಕೆ ಅಡ್ಡಿಪಡಿಸುವುದು ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳಿಗೆ ಕಾರಣವಾಗಬಹುದು ಎಂಬ ಎಚ್ಚರಿಕೆಯನ್ನು ನೀಡಿತು.

ಸಾಮಾಜಿಕ ಕಾರ್ಯಕರ್ತರ ಆಕ್ರೋಶ

ತೀರ್ಪು ಹೊರಬೀಳುತ್ತಿದ್ದಂತೆ ದೆಹಲಿ-ಎನ್‌ಸಿಆರ್‌ನಲ್ಲಿ ಪ್ರತಿಭಟನೆಗಳು ಆರಂಭವಾಗಿವೆ. ಸೋಮವಾರ ಹಲವರು ಇಂಡಿಯಾ ಗೇಟ್‌ವರೆಗೆ ಮೆರವಣಿಗೆ ನಡೆಸಿದರು. ಈ ವಿಷಯವಾಗಿ ಸಾಮಾಜಿಕ ಜಾಲತಾಣಗಳಲ್ಲೂ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಅನೇಕರು ಇದು ಅಮಾನವೀಯ ಎಂದು ಟೀಕಿಸಿದ್ದಾರೆ.

ಪ್ರಾಣಿ ಹಕ್ಕುಗಳ ಸಂಸ್ಥೆ ಪೆಟಾ ಇಂಡಿಯಾ ಈ ನಿರ್ಧಾರವನ್ನು ಅವೈಜ್ಞಾನಿಕ ಎಂದು ಕರೆದಿದೆ. ಇದು ಸಮುದಾಯಗಳಲ್ಲಿ ವ್ಯಾಪಕ ಅವ್ಯವಸ್ಥೆ ಮತ್ತು ಪ್ರಾಣಿಗಳಿಗೆ ನೋವುಂಟು ಮಾಡುತ್ತದೆ. ಬಲವಂತದ ಸ್ಥಳಾಂತರವು ಸರಿಯಾದ ಮಾರ್ಗವಲ್ಲ ಎಂದಿರುವ ಸಂಘಟನೆ, ಸಂತಾನಹರಣ ಮತ್ತು ಲಸಿಕೆ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಅಧಿಕಾರಿಗಳನ್ನು ಒತ್ತಾಯಿಸಿದೆ.

2001ರಲ್ಲಿ ಪರಿಚಯಿಸಲಾದ ಸಂತಾನಹರಣ ಆದೇಶವನ್ನು ಸರಿಯಾಗಿ ಜಾರಿಗೊಳಿಸಿದ್ದರೆ, ಇಂದು ರಸ್ತೆಯಲ್ಲಿ ನಾಯಿಗಳು ಕಡಿಮೆಯಾಗಿರುತ್ತಿದ್ದವು, ಆ ಕಾರ್ಯವನ್ನು ಈಗಲಾದರೂ ಕೈಗೊಳ್ಳುವಂತೆ ಮನವಿ ಮಾಡಿದರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net