

ಕಠ್ಮಂಡು: ನೇಪಾಳದ ರಾಜಕೀಯ ಬೆಳವಣಿಗೆಯ ಕಾರಣ ಬಹುನಿರೀಕ್ಷೆ ಹುಟ್ಟಿಸಿದ್ದ ಆಡಳಿತಾರೂಢ ಕಮ್ಯೂನಿಸ್ಟ್ ಪಾರ್ಟಿಯ ಮಹತ್ವದ ಸ್ಟ್ಯಾಂಡಿಂಗ್ ಕಮಿಟಿ ಸಭೆ ಇಂದು ಶುರುವಾಗಿದೆ. ಪ್ರಧಾನ ಮಂತ್ರಿ ಕೆ.ಪಿ.ಒಲಿ ಶರ್ಮಾ ಅವರ ಗೈರಿನೊಂದಿಗೆ ಸಭೆ ನಡೆಯುತ್ತಿದ್ದು, ಮಾಜಿ ಪ್ರಧಾನಿ "ಪ್ರಚಂಡ" ಎಂದೇ ಜನಪ್ರಿಯರಾದ ಪುಷ್ಪ ಕುಮಾರ್ ದಹಾಲ್ ನೇತೃತ್ವದ ಬಣ ಪರಿಸ್ಥಿತಿಯನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿದೆ.
ಒಲಿ ಮತ್ತು ಪ್ರಚಂಡ ನಡವಿನ ಭಿನ್ನಮತವನ್ನು ಅವರಿಬ್ಬರೇ ಕುಳಿತು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಿ ಎಂಬ ಕಾರಣಕ್ಕೆ ಈ ಮಹತ್ವದ ಸಭೆ ಇದುವರೆಗೂ ಏಳು ಬಾರಿ ಮುಂದೂಡಲ್ಪಟ್ಟಿದೆ. ಆದರೆ ಆ ಪ್ರಯತ್ನ ಫಲಕೊಡಲಿಲ್ಲ. ಪರಿಣಾಮ ಅಂತಿಮವಾಗಿ ಇಂದು ಸಭೆ ಆರಂಭವಾಗಿದೆ.
ಇಂದು ಕೂಡ ಸಭೆ ಆರಂಭವಾಗುತ್ತಿದ್ದಂತೆ ಉಭಯ ನಾಯಕರು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುವುದಕ್ಕೆ ಸಮಯಾವಕಾಶ ಕೇಳಿದ ಕಾರಣ ಸಭೆ ಎರಡು ಗಂಟೆ ಕಾಲ ಮುಂದೂಡಲ್ಪಟ್ಟಿತ್ತು. ಇಷ್ಟೆಲ್ಲ ಆದ ಬಳಿಕ ಅಪರಾಹ್ನ 1.20ಕ್ಕೆ ಪ್ರಧಾನಿ ನಿವಾಸದಲ್ಲಿ ಸಭೆ ಆರಂಭವಾಗಿದೆ ಎಂದು ನೇಪಾಲ್ ಕಮ್ಯೂನಿಸ್ಟ್ ಪಾರ್ಟಿಯ ಹಿರಿಯ ನಾಯಕ ಗಣೇಶ್ ಶಾ ತಿಳಿಸಿದ್ದಾರೆ.
ಪ್ರಚಂಡ ಸೇರಿ ಹಲವು ಉನ್ನತ ನಾಯಕರು ಒಲಿ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ. ಆದ್ದರಿಂದ ಪಕ್ಷದ 441 ಸದಸ್ಯರುಳ್ಳ ಸೆಂಟ್ರಲ್ ಕಮಿಟಿ ಅಧಿಕಾರ ಹಂಚಿಕೆ ವಿವಾದ ಇತ್ಯರ್ಥಗೊಳಿಸುವಲ್ಲಿ ಮಹತ್ವದ ಪಾತ್ರವಹಿಸುವ ನಿರೀಕ್ಷೆ ಇದೆ. ಅದಕ್ಕೂ ಮೊದಲು 45 ಸದಸ್ಯರ ಬಲಿಷ್ಠ ಸ್ಟ್ಯಾಂಡಿಂಗ್ ಕಮಿಟಿ ಪ್ರಧಾನಿ ಪಟ್ಟದಲ್ಲಿರುವ ಕೆ.ಪಿ.ಶರ್ಮಾ ಒಲಿ ಅವರ ಭವಿಷ್ಯ ನಿರ್ಧರಿಸಲಿದ್ದಾರೆ. (ಏಜೆನ್ಸೀಸ್)