

ಮಂಡ್ಯ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆಗೆ ವಿಶೇಷವಾಗಿ ಸಾವಿರ ಕೋಟಿ ರೂ ಅನುದಾನ ತರಬೇಕು. ರಸ್ತೆಗಳನ್ನು ಎನ್‌ಎಚ್‌ಗೆ ಸೇರಿಸಬೇಕು. ಅಂತೆಯೇ ಮೈಷುಗರ್‌ಗೆ ಕೇಂದ್ರ ಸರ್ಕಾರದಿಂದ 500 ಕೋಟಿ ರೂ ಕೊಡಿಸಲಿ. ನಾನೇ ಅಭಿನಂದನಾ ಸಮಾವೇಶ ಮಾಡಿ ಬೆಳ್ಳಿ ಗದೆ ಕೊಡುತ್ತೇನೆ. ಆದರೆ ನಾವು ಕೃಷಿ ವಿಶ್ವವಿದ್ಯಾನಿಲಯಯನ್ನು ಮಂಡ್ಯಕ್ಕೆ ತಂದಿದ್ದೇವೆ. ಅದಕ್ಕೆ ಒಂದು ಥ್ಯಾಂಕ್ಯೂ ಹೇಳುವ ಸೌಜನ್ಯ ಕುಮಾರಸ್ವಾಮಿಗೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಎಲ್ಲವನ್ನೂ ನನ್ನದು ನನ್ನದು ಎನ್ನುತ್ತಾರೆ. ಯಾರು ಎಂಪಿ ಆಗಿದ್ದರೂ ನಿಗದಿಯಾಗಿರುವ ಅನುದಾನ ಬಂದೆ ಬರುತ್ತದೆ. ಬೃಹತ್ ಕೈಗಾರಿಕಾ ಸಚಿವರಾಗಿರುವ ಕುಮಾರಸ್ವಾಮಿ ಏನು ಕೊಡುಗೆ ನೀಡಿದ್ದಾರೆಂದು ಹೇಳಬೇಕು. ಯಾರೋ ಮಾಡಿದ್ದನ್ನು ನಾನು ಎಂದರೆ ಏನು ಪ್ರಯೋಜನ. ಸಿಆರ್‌ಎಫ್‌ನಲ್ಲಿ ಪ್ರತಿ ವರ್ಷ ಹಣ ಬರುತ್ತದೆ, ಅದನ್ನು ದೊಡ್ಡಸ್ತಿಕೆ ಎನ್ನಬಾರದು ಎಂದು ಟೀಕಿಸಿದರು.
ರಾಜ್ಯಕ್ಕೆ ಕೇಂದ್ರದ ಈ ಬಾರಿಯ ಬಜೆಟ್‌ನಲ್ಲೂ ಅನುದಾನ ಸಿಗುವ ನಿರೀಕ್ಷೆ ಇಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಕೊಟ್ಟ ಭರವಸೆಯನ್ನೇ ಈಡೇರಿಸಿಲ್ಲ. ಈಗ ನಮಗೆ ಅನುದಾನ ಕೊಡುತ್ತಾರೆ ಎಂಬ ನಿರೀಕ್ಷೆ ಇಲ್ಲ. ಬೆಂಗಳೂರು ಅಭಿವೃದ್ಧಿ ಸೇರಿದಂತೆ 15, 16 ಸಾವಿರ ಕೋಟಿ ರೂಗಳನ್ನು ಬಿಜೆಪಿ ಅವರು ಘೋಷಣೆ ಮಾಡಿದ್ದರು. ಅದನ್ನೇ ಕೇಂದ್ರ ಸರ್ಕಾರ ಕೊಟ್ಟಿಲ್ಲ. ಕಳೆದ ಬಾರಿ ಬರಗಾಲದ ಪರಿಹಾರ ಕೇಳಿದ್ದೇವು. ಕಾನೂನು ಬದ್ಧವಾಗಿಯೇ ನಾವು ಅವರನ್ನು ಮನವಿ ಮಾಡಿದ್ದೇವು. ಆಗ ಅವರು ಪರಿಹಾರ ಕೊಡಲಿಲ್ಲ. ನಾವು ಕೋರ್ಟ್ ಮೆಟ್ಟಲು ಹತ್ತಿ, ಕೋರ್ಟ್ ಹೇಳಿದ ಮೇಲೆ ಪರಿಹಾರ ಕೊಟ್ಟಿದ್ದು. ಇದು ಸತ್ಯನಾ, ಇಲ್ವಾ ಬಿಜೆಪಿ ಮತ್ತು ಜೆಡಿಎಸ್ ಅವರು ಹೇಳಲಿ. ರಾಜ್ಯ ಅಂದಾಗ ಎಲ್ಲರೂ ಒಂದೇ, ಪಕ್ಷ ಇರಲ್ಲ. ರಾಜ್ಯದ ಸಮಸ್ಯೆಗಳನ್ನು ಎಲ್ಲರೂ ಬಗೆಹರಿಸಲಿ. ರಾಜಕೀಯ ಕಿತ್ತಾಟ ಏನೇ ಇದ್ದರೂ ಕೈ ಜೋಡಿಸಬೇಕು. ಬಿಜೆಪಿ ಮತ್ತು ಜೆಡಿಎಸ್‌ಗೆ ಯಾವ ನಿಲುವು ಇಲ್ಲ. ಮೊಸರಲ್ಲಿ ಕಲ್ಲು ಹುಡುಕುತ್ತಾರೆ, ಸುಮ್ಮನೆ ಟೀಕೆ ಮಾಡುತ್ತಾರೆ ಅಷ್ಟೇ ಎಂದರು.
ಡಾ.ಜಿ.ಪರಮೇಶ್ವರ್ ಮುಂದಿನ ಸಿಎಂ ಕೂಗು ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮದು ಬಿಜೆಪಿ ಅಲ್ಲ. ಯಾರ ಕೂಗು, ಡಿಸಿಎಂ, ಸಿಎಂ, ಪರಮೇಶ್ವರ್, ನಾನು, ಯಾರದು ಇಲ್ಲ. ಎಲ್ಲವೂ ಹೈಕಮಾಂಡ್ ನಿರ್ಧಾರ. ಪಕ್ಷಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರೇ ಅಧ್ಯಕ್ಷರು. ಮುಖ್ಯಮಂತ್ರಿ, ಅಧ್ಯಕ್ಷರ ಬದಲಾವಣೆ ಎಲ್ಲವೂ ಅವರೇ ತೀರ್ಮಾನ ಮಾಡುತ್ತಾರೆ. ಸಿಎಂ ಕೂಡ ನೇರವಾಗಿ ಹೇಳಿದ್ದಾರೆ. ಸಿಎಂ ಬದಲಾವಣೆ ಇಲ್ಲ ಎಂದು ಹೇಳಿದರು.