

ಮುಂಬೈ: ಕಳೆದ ನವೆಂಬರ್ನಲ್ಲಿ ಮಹಾರಾಷ್ಟ್ರ ರಾಜಕಾರಣದಲ್ಲಿ ಅದೆಂಥಾ ಹೈಡ್ರಾಮಾ ನಡೆದಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.
ಒಂದೆಡೆ ಶಿವಸೇನೆ-ಕಾಂಗ್ರೆಸ್-ಎನ್ಸಿಪಿ ಮೈತ್ರಿ ಮಾಡಿಕೊಳ್ಳಲು ಎಲ್ಲ ಸಿದ್ಧತೆಯನ್ನೂ ಮಾಡಿಕೊಂಡಿದ್ದರೆ, ಎನ್ಸಿಪಿ ಮುಖಂಡ ಅಜಿತ್ ಪವಾರ್ ರಾತ್ರೋರಾತ್ರಿ ಬಿಜೆಪಿಗೆ ಬೆಂಬಲ ನೀಡಿದ್ದರು. ಬೆಳ್ಳಂಬೆಳಗ್ಗೆ ಬಿಜೆಪಿಯ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಹಾಗೂ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಮತ್ತೆ ಬೆಂಬಲವನ್ನು ವಾಪಸ್ ಪಡೆದು ಪಕ್ಷಕ್ಕೆ ಮರಳುವ ಮೂಲಕ ಬಿಜೆಪಿ ಸರ್ಕಾರ ಪತನಗೊಂಡಿತ್ತು.
ಅಂದಿನ ತಮ್ಮ ಅಲ್ಪಕಾಲದ ಬಂಡಾಯದ ಬಗ್ಗೆ ಅಜಿತ್ ಪವಾರ್ ವಿಧಾನಸಭೆಯಲ್ಲಿ ಮಾತನಾಡಿದ್ದಾರೆ. ಆಗಿದ್ದು ಆಗಿ ಹೋಯಿತು ಎಂಬ ಧೋರಣೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಅಂದು ನಾನು ಏನು ಮಾಡಿದೆನೋ ಅದನ್ನು ಬಹಿರಂಗವಾಗಿಯೇ ಮಾಡಿದ್ದೇನೆ. ಕದ್ದುಮುಚ್ಚಿ ಏನೂ ಕುತಂತ್ರ ಮಾಡಲಿಲ್ಲ. ಬಳಿಕ ನಾನು ಅದನ್ನು ಸರಿಪಡಿಸಿಕೊಂಡೆ. ಅಲ್ಲಿಂದ ವಾಪಸ್ ಬಂದೆ. ಸದ್ಯಕ್ಕೆ ನಾನು ಈ ಸರ್ಕಾರದಲ್ಲಿಯೇ ದೃಢವಾಗಿ ಇದ್ದೇನೆ ಎಂದು ಹೇಳಿದ್ದಾರೆ.
ಈಗಿನ ಶಿವಸೇನೆ ನೇತೃತ್ವದ ಮಹಾ ವಿಕಾಸ ಅಘಾಡಿ ಸರ್ಕಾರದಲ್ಲಿ ಕೂಡ ಉಪಮುಖ್ಯಮಂತ್ರಿಯಾಗಿರುವ ಅಜಿತ್ ಪವಾರ್ ಹಣಕಾಸು ಖಾತೆಯನ್ನೂ ನಿರ್ವಹಣೆ ಮಾಡುತ್ತಿದ್ದಾರೆ. ವಿಧಾನಸಭೆಯಲ್ಲಿ ಬಜೆಟ್ಗೆ ಸಂಬಂಧಪಟ್ಟಂತೆ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಈ ರೀತಿ ಮಾತನಾಡಿದ್ದಾರೆ. (ಏಜೆನ್ಸೀಸ್)