

ಬೆಂಗಳೂರು: ಬಿಟ್ಟೂ ಬಿಡದೆ ಸುರಿಯುತ್ತಿರುವ ಹಿಂಗಾರು ಮಳೆ ಆರ್ಭಟದಿಂದಾಗಿ ರೈತರಿಗೆ ಬರ ಸಿಡಿಲು ಎದುರಾಗಿದೆ. ಕೊಯ್ಲಿಗೆ ಬಂದಿರುವ ಹಲವು ಬೆಳೆಗಳು ಮಳೆ ಆರ್ಭಟದಿಂದ ನೆಲಕಚ್ಚಿವೆ. ರಾಜ್ಯದಲ್ಲಿ ಈ ಬಾರಿ 70 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿತ್ತು. ಆದರೆ ಈ ಪೈಕಿ ಅರ್ಧದಷ್ಟು ಫಸಲು ಕೈ ಸೇರುವುದೇ ಇದೀಗ ಅನುಮಾನವಾಗಿದೆ. ಮತ್ತೊಂದೆಡೆ ರಾಜ್ಯದಲ್ಲಿ ಇನ್ನೂ ಎರಡು ದಿನ ಭಾರಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆ ಆಗುತ್ತಿದೆ. ಪರಿಣಾಮ ಮುಂಗಾರು ಬೆಳೆಗಳಿಗೆ ಹಿಂಗಾರು ಮಳೆ ಕಂಟಕವಾಗಿದ್ದು, ಕೊಯ್ಲಿಗೆ ಬಂದಿದ್ದ ಏಕದಳ, ದ್ವಿದಳ ಧಾನ್ಯ ಸೇರಿ ವಿವಿಧ ವಾಣಿಜ್ಯ ಬೆಳೆಗಳು ಯಥೇಚ್ಛ ತೇವಾಂಶದಿಂದ ಕೊಳೆಯುತ್ತಿವೆ. ಇದರಿಂದ ರೈತರು ಇನ್ನಷ್ಟು ಸಂಕಷ್ಟಕ್ಕೊಳಗಾಗಿದ್ದಾರೆ.
ಎಲ್ಲೆಲ್ಲಿ ಮಳೆ?: ಬೆಂಗಳೂರು, ಬೆಂ.ಗ್ರಾಮಾಂತರದ ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಚಿತ್ರದುರ್ಗದ ಹಿರಿಯೂರು, ದಾವಣಗೆರೆ, ಕಲಬುರಗಿಯ ಆಳಂದ, ಗಂಗಾಪುರ, ಹಾಸನ, ಹಾವೇರಿಯ ಹನುಮಾನಮಟ್ಟಿ, ಯಾದಗಿರಿಯ ಭೀಮರಾಯನಗುಡಿ, ಶಿವಮೊಗ್ಗದ ಆಗುಂಬೆ ಸೇರಿ ರಾಜ್ಯದ ಹಲವು ಭಾಗಗಳಲ್ಲಿ ಬುಧವಾರವೂ ಮಳೆ ಸುರಿಯಿತು. ಇದರಿಂದ ಹಲವು ಜಿಲ್ಲೆಗಳಲ್ಲಿ 2ನೇ ದಿನವೂ ಜನಜೀವನ ಅಸ್ತವ್ಯಸ್ತಗೊಂಡಿತು.
ತರಕಾರಿ ನೀರು ಪಾಲು: ಕೊಡಗಿನಲ್ಲಿ 1.968 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ, ಕಾಫಿ ಬೆಳೆಗಳಿಗೆ ಹಾನಿಯಾದರೆ, ಚಾಮರಾಜನಗರದಲ್ಲಿ 54 ಹೆಕ್ಟೇರ್ನಲ್ಲಿರುವ ಮುಸುಕಿನ ಜೋಳ, ಒಂದು ಹೆಕ್ಟೇರ್ ಕಬ್ಬು ಬೆಳೆ ಹಾನಿಯಾಗಿದೆ. ಹಾಸನದಲ್ಲಿ 1,303 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಗೀಡಾಗಿದ್ದು 1.53 ಕೋಟಿ ರೂ. ನಷ್ಟ ಉಂಟಾಗಿದೆ. ತುಮಕೂರಿನ ಪಾವಗಡ, ಶಿರಾ, ಮಧುಗಿರಿ, ಕೊರಟಗೆರೆ ತಾಲೂಕುಗಳಲ್ಲಿ ಕಡಲೆಕಾಯಿ ಗಿಡಗಳನ್ನು ಕೀಳಲು ಪರದಾಡುವಂತಾಗಿದೆ. ಕೋಲಾರದಲ್ಲಿ ಕೋಸು, ಟೊಮ್ಯಾಟೊ, ಕ್ಯಾಪ್ಸಿಕಂ, ಪಪ್ಪಾಯ, ಹೂವು ಬೆಳೆಗಾರರು ಕಂಗಾಲಾಗಿದ್ದಾರೆ. ಚಿಕ್ಕಬಳ್ಳಾಪುರದಲ್ಲಿಯೂ ವಿವಿಧ ಬೆಳೆಗಳು ಹಾನಿಯಾಗಿವೆ.
ಕಿತ್ತೂರು ಕರ್ನಾಟಕದಲ್ಲಿ ಸಂಕಷ್ಟ: ಕಿತ್ತೂರು ಕರ್ನಾಟಕ ಭಾಗದಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆ ಸುರಿದು ರೈತರನ್ನು ಸಂಕಷ್ಟಕ್ಕೆ ನೂಕಿದೆ. ಈರುಳ್ಳಿ, ಹತ್ತಿ ಹೆಚ್ಚಿನ ಮಳೆಯಿಂದಾಗಿ ಕೊಳೆಯುವ ಹಂತ ತಲುಪಿವೆ. ಗೋವಿನಜೋಳ ಬೆಳೆಯ ಅರ್ಧ ಕಟಾವು ಮುಗಿದಿದ್ದು, ಇನ್ನರ್ಧ ಜಮೀನಿನಲ್ಲೇ ಇದೆ. ಅಡಕೆಗೆ ಎಲೆಚುಕ್ಕಿ ರೋಗ ಮತ್ತಷ್ಟು ವ್ಯಾಪಕವಾಗುವ ಅಪಾಯ ಎದುರಾಗಿದೆ. ಏಲಕ್ಕಿ, ಕಾಳುಮೆಣಸು ಬಳ್ಳಿಯಲ್ಲಿಯೇ ಕೊಳೆಯುತ್ತಿವೆ. ಇದರಿಂದ ಹಿಂಗಾರು ಮಳೆ ಆರಂಭದಲ್ಲೇ ರೈತರನ್ನು ಆರ್ಥಿಕವಾಗಿ ಸಂಕಷ್ಟಕ್ಕೆ ನೂಕಿದೆ. ಬಾಗಲಕೋಟೆಯಲ್ಲಿ 692 ಹೆಕ್ಟೇರ್ ಕೃಷಿ ಬೆಳೆಗಳು, 131 ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಹಾನಿಗೆ ಒಳಗಾಗಿವೆ. ಮೆಕ್ಕೆಜೋಳ, ಕಬ್ಬು, ಹತ್ತಿ, ಸೂರ್ಯಕಾಂತಿ, ಬಿಳಿಜೋಳ, ಕಡಲೆ ಬೆಳೆಗಳು ಅಧಿಕ ಮಳೆಯಿಂದ ಹಾನಿಯಾಗಿವೆ. ಈರುಳ್ಳಿ ಕಟಾವು ಮಾಡಿ ಜಮೀನಿನಲ್ಲಿ ಬಿಟ್ಟಿದ್ದ ಈರುಳ್ಳಿ ನೀರಿನಲ್ಲಿ ತೇಲುತ್ತಿದ್ದವು. ತೇವಾಂಶದಿಂದ ಇದೀಗ ಈರುಳ್ಳಿ ಕೊಳೆಯಲು ಆರಂಭಿಸಿದ್ದು, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.ಚಿತ್ರದುರ್ಗದಲ್ಲಿ 50 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ, ಶೇಂಗಾ ಬೆಳೆಗೆ ಹಾನಿ ಉಂಟಾಗಿದೆ.
ಇಂದೂ ಭಾರಿ ಮಳೆ: ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರಿನಲ್ಲಿ ಸೆ.17ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಕೊಟ್ಟಿದೆ. ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗದಲ್ಲಿ ಮುಂದಿನ 2 ದಿನ ಹಾಗೂ ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ, ಬಳ್ಳಾರಿಯಲ್ಲಿಯೂ ಸೆ.17ರಂದು ಜೋರಾಗಿ ಮಳೆಯಾಗುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಉಳಿದೆಡೆ ಸಾಧಾರಣ ಮಳೆ ಬೀಳಲಿದೆ.
ಈರುಳ್ಳಿ, ಭತ್ತ ನೀರು ಪಾಲು: ರಾಯಚೂರಿನಲ್ಲಿ ಮಳೆಯಿಂದಾಗಿ 530 ಹೆಕ್ಟೇರ್ಗೂ ಅಧಿಕ ಪ್ರದೇಶದಲ್ಲಿ ಹೆಚ್ಚಿನ ತೇವಾಂಶದಿಂದ ಬೆಳೆಗಳು ಹಾಳಾಗಿವೆ. ಹತ್ತಿ ಜಮೀನುಗಳು ಕೆರೆಯಂತಾಗಿವೆ. ಕೊಪ್ಪಳ, ಕುಕನೂರು, ಗಂಗಾವತಿ, ಕಾರಟಗಿ ಭಾಗದಲ್ಲಿ ಮಳೆಯಿಂದ ಮೆಕ್ಕೆಜೋಳ, ತೊಗರಿ, ಭತ್ತ, ಅಲಸಂದಿ, ಹತ್ತಿ, ಈರುಳ್ಳಿ ಬೆಳೆಗಳಿಗೆ ಹಾನಿಯಾಗಿದೆ. ಭತ್ತದ ಫಸಲು ಗಾಳಿ, ಮಳೆಗೆ ನೆಲಕ್ಕುರುಳಿದ್ದು, ಕಂದು ಜಿಗಿ ಹುಳು ಬಾಧೆ ಹೆಚ್ಚುವ ಭೀತಿ ಶುರುವಾಗಿದೆ. ವಿಜಯನಗರದಲ್ಲಿ ತೋಟಗಾರಿಕೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಬೆಳಗಾವಿಯಲ್ಲಿ ಭತ್ತ, ತೊಗರಿ, ಮೆಕ್ಕೆಜೋಳ, ಈರುಳ್ಳಿ ಸೇರಿ ವಿವಿಧ ತೋಟಗಾರಿಕೆ ಬೆಳೆಗಳು ನೀರು ಪಾಲಾಗಿವೆ. ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ಈರುಳ್ಳಿ, ಮೆಕ್ಕೆಜೋಳ ಬೆಳೆಗಳು ಕಟಾವಿಗೆ ಬಂದಿರುವ ಸಂದರ್ಭದಲ್ಲಿ ಸುರಿದ ಮಳೆಯಿಂದಾಗಿ ನೆಲಕಚ್ಚಿದೆ. ರಾಮದುರ್ಗ, ಸವದತ್ತಿ, ಮೂಡಲಗಿ, ಸೇರಿ ವಿವಿಧೆಡೆ ತರಕಾರಿ ಬೆಳೆ ಹಾನಿಯಾಗಿವೆ. ಮಳೆ ಬಿಡುವು ನೀಡದಿರುವುದರಿಂದ ಬಿತ್ತನೆ ಕಾರ್ಯ ಸ್ಥಗಿತಗೊಂಡಿದೆ.
ನೆಲಕಚ್ಚಿದ ಬೆಳೆಗಳು ಯಾವುವು?: ಮೆಕ್ಕೆಜೋಳ, ಈರಳ್ಳಿ, ತೊಗರಿ, ಕಡಲೆ, ಹುರುಳಿ, ಉದ್ದು, ಹೆಸರು, ಅಲಸಂಧೆ, ಅವರೆ, ಮಟಕಿ, ಶೇಂಗಾ, ಎಳ್ಳು, ಸೂರ್ಯಕಾಂತಿ, ಹರಳಿ, ಹಿಚ್ಚೆಳ್ಳು, ಸೋಯಾ ಅವರೆ, ಅಗಸೆ, ಹತ್ತಿ, ಕಬ್ಬು ಮತ್ತು ತಂಬಾಕು, ಶೇಂಗಾ, ಎಳ್ಳು, ಸೂರ್ಯಕಾಂತಿ, ಹರಳು, ಹುಚ್ಚೆಳ್ಳು, ಸಾಸಿವೆ, ಸೋಯಾ ಅವರೆ, ಕುಸುಬೆ, ಅಗಸೆ ಸೇರಿ ಇತರೆ ಎಣ್ಣೆಕಾಳು ಬೆಳೆಗಳಿಗೆ ಹಾನಿಯಾಗಿವೆ.