

ರಾಣೆಬೆನ್ನೂರ: ಅತಿವೃಷ್ಟಿಯಿಂದ ಬೆಳೆ ಹಾನಿಗೊಳಗಾದ ತಾಲೂಕಿನ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಸ್ಥಳೀಯ ಜೆಡಿಎಸ್ ಕಾರ್ಯಕರ್ತರು ಮಂಜುನಾಥ ಗೌಡಶಿವಣ್ಣನವರ ನೇತೃತ್ವದಲ್ಲಿ ಸೋಮವಾರ ತಹಸೀಲ್ದಾರ್ ಗುರುಬಸವರಾಜ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಜೆಡಿಎಸ್ ಮುಖಂಡ ಮಂಜುನಾಥ ಗೌಡಶಿವಣ್ಣನವರ ಮಾತನಾಡಿ, ತಾಲೂಕಿನಲ್ಲಿ ಇತ್ತೀಚಿಗೆ ಸುರಿದ ಮಳೆಯಿಂದಾಗಿ ನಗರ ಹಾಗೂ ಗ್ರಾಮೀಣ ಪ್ರದೇಶದ ಜನರು ಸಾಕಷ್ಟು ಹಾನಿಗೊಳಗಾಗಿದ್ದಾರೆ. ಅನೇಕ ಮನೆಗಳು ಕುಸಿದು ಬಿದ್ದಿದ್ದು ಅಪಾರ ಪ್ರಮಾಣದ ಬೆಳೆ ನಷ್ಟ ಉಂಟಾಗಿದೆ.
ಹಾನಿಗೊಳಗಾದ ರೈತರ ಹೊಲಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ಮಾಡಿದಾಗ ರೈತರು ಅನುಭವಿಸುತ್ತಿರುವ ಸಂಕಷ್ಟ ಗಮನಕ್ಕೆ ಬಂದಿದೆ. ಅತಿವೃಷ್ಟಿಯಿಂದಾಗಿ ಸುಮಾರು 9564 ಎಕರೆ ಮೆಕ್ಕೆಜೋಳ, 100 ಎಕರೆ ಹತ್ತಿ, 200 ಎಕರೆ ಬೆಳ್ಳುಳ್ಳಿ, 50 ಎಕರೆ ಅವರೆ ಮುಂತಾದ ಬೆಳೆಗಳು ನೀರಿನಲ್ಲಿ ನಿಂತು ಸಂಪೂರ್ಣ ಹಾಳಾಗಿವೆ.
ರೈತರು ಪ್ರತಿ ಎಕರೆಗೆ 10ರಿಂದ 15 ಸಾವಿರ ರೂ.ವರೆಗೆ ಖರ್ಚು ಮಾಡಿದ್ದು ಬೆಳೆಗಳು ಹಾಳಾಗಿದ್ದರಿಂದ ತೀವ್ರ ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ. ಇದಕ್ಕೆ ಸಂಬಂಧಿಸಿದ ಫೋಟೊಗಳು ಹಾಗೂ ಪೆನ್‌ಡ್ರೈವ್ ಸಮೇತ ದಾಖಲೆಗಳನ್ನು ಸಲ್ಲಿಸುತ್ತಿರುವೆ. ಆದ್ದರಿಂದ ಹಾನಿಗೊಳಗಾದ ರೈತರಿಗೆ ಕನಿಷ್ಟ ಪ್ರತಿ ಎಕರೆಗೆ 15 ಸಾವಿರ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಪಕ್ಷದ ತಾಲೂಕು ಎಸ್‌ಸಿ ಘಟಕದ ಅಧ್ಯಕ್ಷ ಸಿದ್ದಪ್ಪ ಗುಡಿಮುಂದ್ಲರ, ಕಾರ್ಯದರ್ಶಿ ಮಹೇಶಪ್ಪ ಹೊನ್ನಜ್ಜೇರ, ಶಿವಪ್ಪ ಡಿ.ಕೆ., ರಮೇಶ ಗಡ್ಡದಗೂಳಿ, ಮಾಳಪ್ಪ ಪೂಜಾರ, ರಾಜು ಡಿ., ಬಸವರಾಜ ಎಸ್., ರಮೇಶ ಪೂಜಾರ, ಕೃಷ್ಣ ಲಮಾಣಿ, ಇಮ್ರಾನ ಖಾಜಿ, ಚನ್ನಬಸಪ್ಪ ಎಚ್.ಜಿ., ಮಾಲತೇಶ ಎಸ್.ಡಿ ಮತ್ತಿತರರು ಉಪಸ್ಥಿತರಿದ್ದರು.