ಉತ್ತಮ ಕಾರ್ಯಗಳಿಗೆ ಟೀಕೆಗಳು ಸಹಜ

sgr rotary
ಸಾಗರದಲ್ಲಿ ರೋಟರಿ ಕ್ಲಬ್ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ಜಿಲ್ಲಾ ನಿಯೋಜಿತ ಗವರ್ನರ್ ವಸಂತ್ ಹೋಬಳಿದಾರ್ ಅಧಿಕಾರ ಹಸ್ತಾಂತರಿಸಿದರು. ಕೆ.ಎಸ್.ಗೌತಮ್, ಲಕ್ಷ್ಮಣ ಗೌಡ, ಡಾ. ರಾಜನಂದಿನಿ, ಚಾರ್ವಿ ಭಟ್ ಇತರರಿದ್ದರು.
Published on

ಸಾಗರ: ಸೇವೆಯಲ್ಲಿ ತೊಡಗಿಕೊಳ್ಳುವುದು ಒಂದು ಅಪೂರ್ವ ಅವಕಾಶ. ಅಂತೆಯೇ ಸ್ಥಳೀಯವಾಗಿ ಏನು ಅಗತ್ಯವಿದೆ ಎಂಬುದನ್ನು ತಿಳಿದುಕೊಂಡು ಸೇವಾ ಕಾರ್ಯ ಮಾಡಬೇಕು ಎಂದು ರೋಟರಿ ಜಿಲ್ಲಾ ನಿಯೋಜಿತ ಗವರ್ನರ್ ವಸಂತ್ ಹೋಬಳಿದಾರ್ ಅಭಿಪ್ರಾಯಪಟ್ಟರು.

ಸಾಗರದ ರೋಟರಿ ಭವನದಲ್ಲಿ ಏರ್ಪಡಿಸಿದ್ದ ರೋಟರಿ ಸಂಸ್ಥೆಯ 2025-26ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಾಗರದಲ್ಲಿ ಬ್ಲಡ್ ಬ್ಯಾಂಕ್ ಅಗತ್ಯ ಇರುವುದನ್ನು ಮನಗಂಡು ರೋಟರಿ ಸಂಸ್ಥೆ ಇದನ್ನು ಸಾಧ್ಯವಾಗಿಸಿದೆ. ಹಾಗೆಯೇ ಬೇರೆ ಅಗತ್ಯಗಳನ್ನು ತಿಳಿದು ಸೇವಾ ಕಾರ್ಯಕ್ಕೆ ಮುಂದಾಗಬೇಕು ಎಂದರು.

ಒಳ್ಳೆಯ ಕೆಲಸಗಳಿಗೆ ದಾನಿಗಳು ನೆರವಾಗುತ್ತಾರೆ. ಉತ್ತಮ ಕಾರ್ಯ ಮಾಡಿದಾಗಲೂ ಟೀಕೆ ಮಾಡುತ್ತಾರೆ. ಆದರೆ ಸಾಧನೆ ಮಾಡುವಾಗ ಅವುಗಳಿಗೆ ಹೆಚ್ಚು ಮಹತ್ವ ಕೊಡುವುದು ಬೇಡ. ರೋಟರಿ ಸಂಸ್ಥೆ ಅಭಿವೃದ್ಧಿ ಕಾರ್ಯಗಳನ್ನು ಹೇಗೆ ಮಾಡಬೇಕು ಎಂಬುದನ್ನು ತಿಳಿಸಿಕೊಡುತ್ತದೆ. ಹಾಗಾಗಿ ನಿಸ್ವಾರ್ಥದಿಂದ ಸೇವಾ ಕಾರ್ಯ ಮಾಡಬೇಕು ಎಂದು ತಿಳಿಸಿದರು.

ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಕೆ.ಎಸ್.ಗೌತಮ್, ಶಿಕ್ಷಣ, ಪರಿಸರ, ಆರೋಗ್ಯ, ರಸ್ತೆ ಸುರಕ್ಷತೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು. ವೃತ್ತಿಪರ ಶಿಕ್ಷಣದ ಬಗ್ಗೆ ಸಭೆ, ಶಾಲೆಗಳಲ್ಲಿ ಕುಡಿಯುವ ನೀರು, ಶೌಚಗೃಹ ನಿರ್ಮಿಸಲಾಗುವುದು. ಪ್ರಬಂಧ ಸ್ಪರ್ಧೆ, ದಂತ ತಪಾಸಣೆ, ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಆಯೋಜಿಸಲಾಗುವುದು ಎಂದರು.

ನಿಕಟಪೂರ್ವ ಅಧ್ಯಕ್ಷ ಡಾ. ನಿರಂಜನ ಹೆಗಡೆ ಹೊಸಬಾಳೆ ಮಾತನಾಡಿ, ರೋಟರಿ ಸಂಸ್ಥೆಯಲ್ಲಿ ಸೇವಾ ಕಾರ್ಯ ಮಾಡಲು ವಿಪುಲ ಅವಕಾಶಗಳಿವೆ. ನಮ್ಮ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಂಡು ಸಮೂಹದಲ್ಲಿ ಬೆರೆಯಲು ರೋಟರಿ ಅವಕಾಶ ಮಾಡಿಕೊಡುತ್ತದೆ ಎಂದು ಹೇಳಿದರು.

28 ವರ್ಷಗಳಿಂದ ರೋಟರಿ ಸಂಸ್ಥೆಯಲ್ಲಿ ಕೆಲಸ ಮಾಡಿದ ಕುಮಾರಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ನೂತನ ಕಾರ್ಯದರ್ಶಿ ವಿ.ಸಿ.ಶಿವಪ್ಪನಾಯ್ಕ ಅಧಿಕಾರ ಸ್ವೀಕರಿಸಿದರು. ರೋಟರಿ ಜಿಲ್ಲೆ ಸಹಾಯಕ ಗವರ್ನರ್ ಲಕ್ಷ್ಮಣ ಗೌಡ, ವಲಯ ಸೇನಾನಿ ಡಾ. ರಾಜನಂದಿನಿ ಕಾಗೋಡು, ಚಾರ್ವಿ ಜಿ. ಭಟ್, ಸಂದೇಶಕುಮಾರ್ ಶೆಟ್ಟಿ, ಗುರುಪ್ರಸಾದ್, ಶಿವಕುಮಾರ್, ಶಿವಪ್ಪ ನಾಯ್ಕ, ನರೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net