

ಚಿಕ್ಕಬಳ್ಳಾಪುರ: ಗ್ರಾನೈಟ್ ಕಲ್ಲು ಸಾಗಿಸುತ್ತಿರುವ ಲಾರಿಯು ಜಮೀನಿನ ನಡುವೆ ಹಾದು ಹೋಗುವುದನ್ನು ತಡೆದ ಎಂಬ ಕಾರಣಕ್ಕೆ ರೈತನ ಮೇಲೆ ಲಾರಿ ಹತ್ತಿಸಿ ಬಲಿ ಪಡೆದರು ಎನ್ನಲಾದ ಪ್ರಕರಣ ತಾಲೂಕಿನ ಅಡ್ಡಗಲ್ಲುವಿನಿಂದ ವರದಿಯಾಗಿದೆ.
ಗ್ರಾಮದ ರಾಘವೇಂದ್ರ (30) ಮೃತ. ಆರೋಪಿ ಲಾರಿ ಚಾಲಕ ಸುರೇಶ್ (42). ಗ್ರಾನೈಟ್ ಲಾರಿಯನ್ನು ಜಮೀನಿನಲ್ಲಿ ಓಡಿಸುತ್ತಿರುವುದು ಏಕೆಂದು ರಾಘವೇಂದ್ರ ಪ್ರಶ್ನಿಸಿದಕ್ಕೆ ಸಿಟ್ಟಿಗೆದ್ದ ಸುರೇಶ್ ಲಾರಿಯನ್ನು ರಿವರ್ಸ್ ತಂದು ರೈತನ ಮೇಲೆ ಹತ್ತಿಸಿದ್ದಾನೆ ಎಂದು ಹೇಳಲಾಗಿದೆ. ಆದರೆ ಮತ್ತೊಂದೆಡೆ ಮಾತಿನ ಚಕಮಕಿ ನಡುವೆ ಓವರ್ ಲೋಡ್ ಲಾರಿ, ನಿಯಂತ್ರಣಕ್ಕೆ ಬಾರದೇ ಹಿಂದಕ್ಕೆ ಚಲಿಸಿ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಖಾಸಗಿ ಶಾಲೆಯ ಶಿಕ್ಷಕರಾಗಿದ್ದ ರಾಘವೇಂದ್ರ ಗ್ರಾಮದ ಸಮೀಪದ ಗುಮ್ಮಲಾಪುರ ತೋಟದ ಜಮೀನಿನಲ್ಲಿ ಕೃಷಿ ಚಟುವಟಿಕೆ ಮಾಡುತ್ತಿದ್ದರು. ಹಲವು ಬಾರಿ ತೋಟದಲ್ಲಿ ಅಡ್ಡಾದಿಡ್ಡಿಯಾಗಿ ಗ್ರಾನೈಟ್ ವಾಹನಗಳನ್ನು ಓಡಿಸುತ್ತಿರುವುದನ್ನು ಪ್ರಶ್ನಿಸಿ ಗಲಾಟೆ ಮಾಡಿದ್ದರು. ಇದಲ್ಲದೆ ನಡುವೆ ಸೋಮವಾರ ಲಾರಿಯ ಚಾಲಕ ಸುರೇಶನೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ಇದೇ ವೇಳೆ ಲಾರಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ರಾಘವೇಂದ್ರ ಅವರನ್ನು ಕುಟುಂಬಸ್ಥರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗಲಿಲ್ಲ.
ಮೊದಲು ಕುಟುಂಬಸ್ಥರು ಅಪಘಾತ ಎಂಬುದಾಗಿ ಭಾವಿಸಿದ್ದರು. ಇದಕ್ಕೆ ಮೃತನ ತಂದೆ ಬೈಯಣ್ಣ ಮೊದಲು ಲಾರಿ ಡಿಕ್ಕಿ ಹೊಡೆದು ಅಪಘಾತವಾಗಿ ಕಾಲು ಮುರಿದಿದೆ ಎಂದು ಠಾಣೆಗೆ ದೂರು ನೀಡಿದ್ದರು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ತಮ್ಮನಿಂದ ಮಾಹಿತಿ ಪಡೆದ ಸಹೋದರ ಗಂಗಾಧರ್, ದುರುದ್ದೇಶದಿಂದ ಕೊಲೆ ಮಾಡಲಾಗಿದೆ ಎಂದು ಮತ್ತೊಂದು ದೂರು ಸಲ್ಲಿಸಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಅಡ್ಡಗಲ್ಲುವಿನಲ್ಲಿ ಗ್ರ್ಯಾನೆಟ್ ಲಾರಿ ಡಿಕ್ಕಿ ಹೊಡೆದು ರಾಘವೇಂದ್ರ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಐಆರ್ ಹಾಕಲಾಗಿದೆ. ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ಹೇಳಿದ್ದಾರೆ.
ಕ್ಷೇತ್ರದಲ್ಲಿ ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ. ಓವರ್ ಲೋಡ್ ಮತ್ತು ಅತಿ ವೇಗದ ಚಾಲನೆಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಕ್ಷೇತ್ರದಲ್ಲಿ ಟಿಪ್ಪರ್ ವಾಹನಗಳು ವೇಗದಿಂದ ಸಂಚರಿಸುತ್ತಿರುತ್ತವೆ. ಓವರ್ ಲೋಡ್ ಬೇರೆ ಇರುತ್ತದೆ. ಇದಕ್ಕೆ ತಾಲೂಕಿನಲ್ಲಿ ಎಲ್ಲ ಅಕ್ರಮ ಗಣಿಗಾರಿಕೆ ಕೇಂದ್ರಗಳನ್ನು ನಿಲ್ಲಿಸಲು ಸೂಚಿಸಲಾಗಿದೆ. ನಿಯಮ ಉಲ್ಲಂಘಿಸುವವರಿಗೆ ನೋಟಿಸ್ ನೀಡಲಾಗಿದೆ. ಸೋಮವಾರ ಒಂದೇ ದಿನ 12 ಲಾರಿ ವಶಪಡಿಸಿಕೊಳ್ಳಲಾಗಿದೆ ಎಂದರು. ಸರ್ಕಾರದಿಂದ ನಿಯಮಾನುಸಾರ ಪರವಾನಗಿ ಪಡೆದುಕೊಂಡು ಗಣಿಗಾರಿಕೆ ನಡೆಸಬಹುದು. ಆದರೆ, ನಿಯಮಗಳನ್ನು ಉಲ್ಲಂಘಿಸುವಂತಿಲ್ಲ. ಕಡ್ಡಾಯವಾಗಿ ಸುರಕ್ಷತಾ ಕ್ರಮ ಪಾಲಿಸಬೇಕು ಎಂದರು.