

Lucknow: ಭಾರತದ ಕ್ರಿಕೆಟಿಗ ಮೊಹಮ್ಮದ್ ಶಮಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಸೋಮವಾರ (ಮೇ.19) ಭೇಟಿಯಾಗಿದ್ದಾರೆ. ಈ ಫೋಟೋ ವೈರಲ್ ಆಗುತ್ತಿದ್ದಂತೆ ಸೊಶೀಯಲ್ ಮೀಡಿಯಾದಲ್ಲಿ ಹಲವಾರು ಚರ್ಚೆಗೆ ಕಾರಣವಾಗಿದೆ.
ಸೋಮವಾರ ಲಕ್ನೋದಲ್ಲಿರುವ ಸಿಎಂ ಯೋಗಿ ಆದಿತ್ಯನಾಥ್ ನಿವಾಸದಲ್ಲಿ ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಸಿಎಂ ಯೋಗಿ ಅವರು ಶಮಿಯನ್ನು ಹೂಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿ, ಕೆಲ ಸಮಯ ಇಬ್ಬರೂ ಚರ್ಚಿಸಿದ್ದಾರೆ.
ಈ ಕ್ರಿಕೆಟಿಗ ಮತ್ತು ರಾಜಕಾರಣಿಯ ಭೇಟಿ ರಾಜಕೀಯ ಚರ್ಚೆಗೆ ನಾಂದಿ ಹಾಡಿದೆ. ಶಮಿ ಅವರು ರಾಜಕೀಯಕ್ಕೆ ಕಾಲಿಡುತ್ತಾರಾ, ಬಿಜೆಪಿ ಪಕ್ಷಕ್ಕೆ ಸೇರುತ್ತಾರಾ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ. ಶಮಿ ಮತ್ತು ಸಿಎಂ ಯೋಗಿ ಅವರು ಭೇಟಿಯಾದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಇಂತಹ ಚರ್ಚೆಗಳು ಹುಟ್ಟಿಕೊಳ್ಳುತ್ತಿವೆ.
ಶಮಿ ಭಾರತವನ್ನು 64 ಟೆಸ್ಟ್ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. (ಏಜೆನ್ಸೀಸ್)