

ವಿರಾಜಪೇಟೆ: ಕ್ರೀಡೆಗಳು ಸಾಮರಸ್ಯದ ಸಂಕೇತವಾಗಿದೆ. ಇಲ್ಲಿ ಜಾತಿ, ಧರ್ಮ ಭೇದವಿಲ್ಲದೆ ಎಲ್ಲರೂ ಒಂದೇ ಎಂದು ಭಾಗವಹಿಸುವ ಮನೋಭಾವ ಇರಬೇಕು ಎಂದು ಉದ್ಯಮಿ ಮತ್ತು ಸಮಾಜ ಸೇವಕ ಎಂ.ಇ.ಶರೀಫ್ ಸಲಹೆ ನೀಡಿದರು.
ವಿರಾಜಪೇಟೆ ನಗರದಲ್ಲಿ ಕ್ರೌನ್ಸ್ ಕ್ರೀಕೆರ್ಸ್ ಸಂಸ್ಥೆಯ ವತಿಯಿಂದ ಸಂತ ಅನ್ನಮ್ಮ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಕೊಡಗು 40+ ಲೆಜೆಂಡ್ ಕ್ರಿಕೆಟ್ ಪ್ರಿಮಿಯರ್ ಲೀಗ್ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಕೊಡಗು ಜಿಲ್ಲೆ ಕ್ರೀಡೆಗಳ ತವರೂರು. ಕ್ರೀಡಾ ಆಯೋಜಕರಿಗೆ ದಾನಿಗಳು ಪ್ರೋತ್ಸಾಹ ನೀಡುವಂತಾಗಬೇಕು. ಕ್ರೀಡೆಗಳು ಆಯೋಜಿತವಾದಲ್ಲಿ ಬಹುಮುಖ ಪ್ರತಿಭೆಗಳನ್ನು ಸಮಾಜಕ್ಕೆ ಕೊಡುಗೆ ನೀಡಬಹುದಾಗಿದೆ ಎಂದು ಹೇಳಿದರು.
ಅಂತಾರಾಷ್ಟ್ರೀಯ ರಗ್ಬಿಪಟು ಮಾದಂಡ ತಿಮ್ಮಯ್ಯ ಮಾತನಾಡಿ, ಕ್ರೀಡೆಗಳಲ್ಲಿ ಭಾಗವಹಿಸುವ ಛಲ ಮುಖ್ಯ. ಸಮಾಜದಲ್ಲಿ ಅರ್ಥಿಕವಾಗಿ ನೆರವು ನೀಡುವವವರು ಮಾತ್ರ ಸಮಾಜ ಸೇವಕರಲ್ಲ. ನೈಜವಾದ ಸಮಾಜ ಸೇವಕರನ್ನು ಸಂಘ ಸಂಸ್ಥೆಗಳು ಗುರುತ್ತಿಸುವಂತಾಗಬೇಕು. ವಿನೂತನ ಪ್ರಯತ್ನ ಮಾಡಿರುವ ಕ್ರೌನ್ಸ್ ಕ್ರಿಕೆಟರ್ಸ್‌ಗೆ ಶುಭ ಹಾರೈಸಿದರು.
ಮೌಂಟನ್ ವ್ಯೆ ಆಂಗ್ಲ ಮಾಧ್ಯಮ ಶಾಲೆಯ ಸಂಸ್ಥಾಪಕ ದಿ.ನಜೀರ್ ಅಹಮ್ಮದ್ ಅವರ ಪತ್ನಿ ನಿಕಾತ್ ಆಸ್ಮ ಮಾತನಾಡಿದರು. ಹಿರಿಯ ಕ್ರಿಕೆಟ್ ಆಟಗಾರ ಎಲ್.ಜಿ. ಭಾಸ್ಕರ್, ಅಮಾನುಲ್ಲಾ, ಪಾಪು ಮುರ್ನಾಡ್, ಜೀವನ್, ಹರೀಶ್ ಮಡಿಕೇರಿ, ನಂದಾ, ಮೆಲ್ವೀನ್ ಲೋಬೋ, ಕ್ಲೀಫರ್ಡ್ ಡಿಮೆಲ್ಲೋ, ನಿವೃತ್ತ ಶಿಕ್ಷಕರಾದ ಆಲ್ಬರ್ಟ್ ಡಿಸೋಜಾ ಅವನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಉದ್ಯಮಿ ಕೆ.ಪಿ.ಶಕೀಲ್, ಪುರಸಭೆಯ ಸದಸ್ಯ ಅಬ್ದುಲ್ ಜಲೀಲ್, ಆಯೋಜಕರಾದ ಅಲ್ತಾಫ್, ಎಚ್.ಎಂ. ಆನಂದ್, ನಿಸಾರ್, ಅತೀಫ್ ಮನ್ನಾ, ಟೇರಿ ಡಿಸಿಲ್ವ ಉಪಸ್ಥಿತರಿದ್ದರು.
ಪಂದ್ಯಾವಳಿಯ ಫೈನಲ್‌ನಲ್ಲಿ ಟೀಮ್ ಮಂಜೇಶ್ ತಂಡವನ್ನು ಮಣಿಸಿ ಕೂರ್ಗ್ ವಾರಿರ್ಸ್ ತಂಡ ಜಯ ಗಳಿಸಿತು. ವಿಜೇತ ತಂಡಕ್ಕೆ 66,666 ನಗದು ಮತ್ತು ಆಕರ್ಷಕ ಟ್ರೋಫಿ ಮತ್ತು ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 44,444 ನಗದು, ಟ್ರೋಫಿ ನೀಡಲಾಯಿತು.