

ಹೊಸನಗರ: ಗ್ರಾಮೀಣ ಭಾಗದ ಜನರು ಆರ್ಥಿಕ ಶೋಷಣೆಯಿಂದ ಹೊರಬರಲು ಸಹಕಾರ ಕ್ಷೇತ್ರದಿಂದ ಮಾತ್ರ ಸಾಧ್ಯ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಮೂಡುಗೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಗರ ಶ್ರೀ ನೀಲಕಂಠೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಕಚೇರಿ ಕಟ್ಟಡ, ಬಹು ಸೇವಾ ವಾಣಿಜ್ಯ ಗೋದಾಮುಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಸಂಘದ ಧ್ಯೇಯೋದ್ದೇಶ ತಿಳಿದು ಷೇರುದಾರರು ವ್ಯವಹರಿಸಬೇಕು. ಸಹಕಾರ ಕ್ಷೇತ್ರದಲ್ಲಿ ರಾಜಕಾರಣ ನುಸುಳಬಾರದು. ಸುಮಾರು 3500 ಮಂದಿ ಷೇರುದಾರರು ಈ ಸಂಘದ ವ್ಯವಹಾರವನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಇತ್ತೀಚೆಗೆ ಕೃಷಿತಜ್ಞ ಡಾ. ವೈದ್ಯನಾಥನ್ ವರದಿ ಜಾರಿಗೊಂಡ ಬಳಿಕ ಸಹಕಾರ ಸಂಘಗಳು ಸಾವಿರಾರು ಬಡ ಕುಟುಂಬಗಳಿಗೆ ಆರ್ಥಿಕ ಶಕ್ತಿ ತುಂಬಿವೆ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಮಾತನಾಡಿ, ಬ್ಯಾಂಕ್ ಜಿಲ್ಲೆಯ 163 ಸಹಕಾರ ಸಂಘಗಳಿಗೆ ಶೂನ್ಯ ಬಡ್ಡಿ ದರದಲ್ಲಿ 130 ಕೋಟಿ ರೂ. ಸಾಲ ನೀಡಿದೆ. ಡಿಸಿಸಿ ಬ್ಯಾಂಕ್ ಈ ಬಾರಿ 1070 ಕೋಟಿ ಬೆಳೆಸಾಲ ನೀಡಿದೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಮಕ್ಕಿಮನೆ ಲೀಲಕೃಷ್ಣ ಮಾತನಾಡಿ, ಸಂಘವು 2023-24ನೇ ಆರ್ಥಿಕ ಸಾಲಿನಲ್ಲಿ 34.49 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದರು. ಸಂಘದ ಉಪಾಧ್ಯಕ್ಷ ಹಿಲ್ಕುಂಜಿ ಕುಮಾರ್, ಎಂ.ಎಂ.ಪರಮೇಶ್, ಮ್ಯಾಮ್ಕೋಸ್ ನಿರ್ದೇಶಕ ಕೆ.ವಿ.ಕೃಷ್ಣಮೂರ್ತಿ, ವಡ್ಡಿನಬೈಲು ಸುಬ್ರಹಣ್ಯ, ವಾಟಗೋಡು ಸುರೇಶ್, ಗ್ರಾಪಂ ಅಧ್ಯಕ್ಷೆ ಸಂಗೀತಾ, ಸದಸ್ಯ ಕರುಣಾಕರ ಶೆಟ್ಟಿ, ಸುಮಾ ಸುಬ್ರಹ್ಮಣ್ಯ, ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಕಟ್ಟಡ ಸಮಿತಿ ಅಧ್ಯಕ್ಷ ಸಾದಗಲ್ ಅಂಬರೀಷ್, ಸತೀಶ್ ಪಟೇಲ್, ನಿರ್ದೇಶಕರಾದ ರೇಖಾ ಆದಿರಾಜ್ ಇತರರಿದ್ದರು.