ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವಿತರಣೆ, ಕಾರ್ಯಾಚರಣೆ ಮತ್ತು ಕ್ಲೋಸ್ ಮಾಡುವುದಕ್ಕೆ ಅಗತ್ಯವಾದ ಪ್ರಮುಖ ಮಾರ್ಗದರ್ಶಿ ಸೂತ್ರವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಪ್ರಕಟಿಸಿದೆ. ಇದು ಈ ವರ್ಷ ಜುಲೈ 1ರಿಂದ ಚಾಲ್ತಿಗೆ ಬರಲಿದೆ. ಈ ಕುರಿತ ಸಂಕ್ಷಿಪ್ತ ವಿವರ ಇಲ್ಲಿದೆ.
ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡುವುದಕ್ಕೆ ಮನವಿ ಬಂದ 7 ದಿನಗಳ ಒಳಗೆ ಅದನ್ನು ಅಂಗೀಕರಿಸಬೇಕು. ಇದು ಆ ಕ್ರೆಡಿಟ್ ಕಾರ್ಡ್ದಾರ ಬಾಕಿ ಪಾವತಿ ಇಲ್ಲ ಎಂಬುದನ್ನು ಖಾತರಿಪಡಿಸಿಕೊಂಡು ಮಾಡುವ ಷರತ್ತನ್ನು ಒಳಗೊಂಡಿದೆ.
ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡುವುದಕ್ಕೆ ಕ್ರಮ ತೆಗೆದುಕೊಂಡ ಕೂಡಲೆ ಇ ಮೇಲ್, ಎಸ್ಎಂಎಸ್ ಮುಂತಾದವುಗಳ ಮೂಲಕ ಈ ಬಗ್ಗೆ ಕಾರ್ಡ್ ಬಳಕೆದಾರರಿಗೆ ಮಾಹಿತಿ ನೀಡಬೇಕು.
ಕ್ರೆಡಿಟ್ ಕಾರ್ಡ್ ಖಾತೆ ಮುಚ್ಚಲು ಮನವಿ ಸಲ್ಲಿಸುವುದಕ್ಕೆ ಕಾರ್ಡ್ ಬಳಕೆದಾರರಿಗೆ ಹಲವು ವೇದಿಕೆಗಳನ್ನು ಒದಗಿಸಬೇಕು. ಇದರಲ್ಲಿ, ಸಹಾಯವಾಣಿ, ನಿಶ್ಚಿತ ಇ ಮೇಲ್ ಐಡಿ, ಇಂಟರಾಕ್ಟಿವ್ ವಾಯ್್ಸ ರೆಸ್ಪಾನ್ಸ್ (ಐವಿಆರ್), ವೆಬ್ಸೈಟ್ನಲ್ಲಿ ಕಾಣುವಂತೆ ಇದರ ಲಿಂಕ್, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಆಪ್ ಮತ್ತು ಇತರೆ ವೇದಿಕೆಗಳು ಒಳಗೊಂಡಿವೆ.
ಕ್ರೆಡಿಟ್ ಕಾರ್ಡ್ ಖಾತೆಯನ್ನು ಮುಚ್ಚುವ ಮನವಿಯನ್ನು ಅಂಚೆ ಅಥವಾ ನಿಶ್ಚಿತ ವಿಧಾನದ ಮೂಲಕವೇ ಕಳುಹಿಸಬೇಕು ಎಂದು ಗ್ರಾಹಕ ರಿಗೆ ಕ್ರೆಡಿಟ್ ಕಾರ್ಡ್ ವಿತರಕರು ಒತ್ತಡ ಹೇರುವಂತೆ ಇಲ್ಲ. ಇದು ವಿಳಂಬಕ್ಕೆ ಕಾರಣವಾದೀತು.
ಒಂದೊಮ್ಮೆ ಕ್ರೆಡಿಟ್ ಕಾರ್ಡ್ ವಿತರಕರು ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡುವ ಮನವಿ ಪಡೆದ ಏಳು ದಿನಗಳ ಒಳಗೆ ಅದನ್ನು ಅನುಷ್ಠಾನಗೊಳಿಸದೇ ಇದ್ದರೆ ದಿನಕ್ಕೆ 500 ರೂಪಾಯಿಯಂತೆ ಆ ಖಾತೆ ಮುಚ್ಚುವ ತನಕದ ದಿನಗಳ ಅವಧಿಯ ಮೊತ್ತವನ್ನು ಗ್ರಾಹಕರಿಗೆ ನೀಡಬೇಕು. ಇಲ್ಲಿ ಗ್ರಾಹಕರು ಯಾವುದೇ ಬಾಕಿ ಉಳಿಸಿಕೊಂಡಿರಬಾರದು.
ಒಂದು ವರ್ಷಕ್ಕಿಂತ ಹೆಚ್ಚು ಅವಧಿಗೆ ಕ್ರೆಡಿಟ್ ಕಾರ್ಡ್ ಬಳಸದೇ ಇದ್ದರೆ ಆಗ ಆ ಕಾರ್ಡ್ ಮುಚ್ಚುವ ತೀರ್ವನವನ್ನು ಕ್ರೆಡಿಟ್ ಕಾರ್ಡ್ ವಿತರಕರು ಕೈಗೊಂಡು ಕಾರ್ಡ್ದಾರರಿಗೆ ಮಾಹಿತಿ ನೀಡಬೇಕು.
ಈ ಮಾಹಿತಿ ಪಡೆದ ಬಳಿಕ 30 ದಿನಗಳ ಒಳಗೆ ಕಾರ್ಡ್ ಬಳಕೆದಾರರಿಂದ ಹಿಮ್ಮಾಹಿತಿ ಬಾರದೇ ಹೋದರೆ, ಬಳಕೆದಾರರು ಬಾಕಿ ಪಾವತಿಸಬೇಕಾದ್ದೇನೂ ಇಲ್ಲ ಎಂಬುದನ್ನು ಖಾತರಿಪಡಿಸಿಕೊಂಡು ಆ ಖಾತೆಯನ್ನು ಮುಚ್ಚಬಹುದು.
ಕ್ರೆಡಿಟ್ ಇನ್ಪಾಮೇಷನ್ ಕಂಪನಿಗೆ ಈ ರೀತಿ ಮುಚ್ಚಿದ ಖಾತೆಯ ಮಾಹಿತಿಯನ್ನು 30 ದಿನಗಳ ಒಳಗೆ ಕ್ರೆಡಿಟ್ ಕಾರ್ಡ್ ವಿತರಣಾ ಕಂಪನಿ ಒದಗಿಸಬೇಕು.
ಕ್ರೆಡಿಟ್ ಕಾರ್ಡ್ ಖಾತೆ ಮುಚ್ಚಿದ ಬಳಿಕ ಅದರಲ್ಲಿ ಬಳಕೆದಾರರ ಹಣ ಇದ್ದರೆ ಅದನ್ನು ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಬೇಕು.