

ಚಿತ್ರದುರ್ಗ: ಪಠ್ಯ ಕಲಿಕೆ ಜತೆಗೆ ಸೃಜನಶೀಲ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು ಎಂದು ಜಿಲ್ಲಾ ವಾರ್ತಾಧಿಕಾರಿ ಬಿ.ವಿ. ತುಕರಾಂರಾವ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಗರದ ಜೋಗಿ ಮಟ್ಟಿ ರಸ್ತೆ ಪರಿಶಿಷ್ಟ ವರ್ಗಗಳ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಶುಕ್ರವಾರ ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಯರಿಗೆ ಸುಗಮ ಸಂಗೀತ, ಹಾರ‌್ಮೋನಿಯಂ ಹಾಗೂ ತಬಲಾ ವಾದ್ಯ ಕಲಿಕಾ ತರಬೇತಿ ಉದ್ಘಾಟಿಸಿ ಮಾತನಾಡಿದರು.
ಸೃಜನಶೀಲ ಚಟುವಟಿಕೆಗಳು ಸಮಾಜದಲ್ಲಿ ಉತ್ತಮ ಅವಕಾಶಗಳನ್ನು ಪಡೆಯಲು ನೆರವಾಗಲಿವೆ. ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುವ ವಿದ್ಯಾರ್ಥಿಗಳು ಮಾತ್ರ ಪ್ರತಿಭಾವಂತರಲ್ಲ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವವರೂ ಸಹ ಪ್ರತಿಭಾವಂತರೇ, ಅಂತವರಿಂದ ನಾಡು ಹಾಗೂ ದೇಶಕ್ಕೆ ಕೀರ್ತಿ ಅವರಿಂದ ಸಾಧ್ಯವಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ. ಗುರುನಾಥ್ ಮಾತನಾಡಿ, ಸಂಗೀತ, ಕಲಾ ಮಾಧ್ಯಮ ಮನಸ್ಸಿಗೆ ನೆಮ್ಮದಿ ಹಾಗೂ ಹರ್ಷ ಕೊಡುತ್ತವೆ. ಚಿತ್ರದುರ್ಗ ನೆಲ ಸಂಗೀತ, ಸಾಹಿತ್ಯ, ಸಂಸ್ಕೃತಿಗೆ ಹೆಸರಾಗಿದೆ. ಇಲಾಖೆಯಿಂದ 6 ತಿಂಗಳ ಕಾಲ ತರಬೇತಿ ನೀಡಲಾಗುವುದು. ವಾರದಲ್ಲಿ 3 ದಿನ ತರಬೇತಿ ಇರುತ್ತದೆ. ವಿದ್ಯಾರ್ಥಿಗಳು ಆಸಕ್ತಿವಹಿಸಿ ಕಲಿಯುಬೇಕು ಎಂದರು.
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಚ್. ದಿವಾಕರ್, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಂ.ಟಿ. ಶಿವರಾಜ್, ನಿಲಯ ಪಾಲಕಿ ಕೆ.ಎಸ್. ವೈಶಾಲಿ, ಹೊಸದುರ್ಗದ ಸುಗಮ ಸಂಗೀತ ಕಲಾವಿದ ಒ. ಮೂರ್ತಿ ಇತರರು ಇದ್ದರು.