

ಬೆಂಗಳೂರು: ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯತಿಗೆ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆ ಸೃಜಿಸುವ ಬಗ್ಗೆ ಸರ್ಕಾರ ಸಮಿತಿ ರಚನೆ ಮಾಡಿದೆ.
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ವಿ.ವಿ. ಅಧ್ಯಯನ ಸಮಿತಿ ಸೋಮವಾರದಿಂದ ಆಯ್ದ 32 ಗ್ರಾಮ ಪಂಚಾಯಿತಿಗಳಿಗೆ ಸಮಿತಿ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದೆ.
ಬೆಳಗಾವಿ, ಧಾರವಾಡ, ರಾಯಚೂರು, ಕೂಪ್ಪಳ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಮಂಡ್ಯ ಮತ್ತು ಕೂಡಗು ಜಿಲ್ಲಾ ಪಂಚಾಯತಿಗಳ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಿಗೆ ಅಧ್ಯಯನ ಸಮಿತಿ ಪ್ರವಾಸ ಕೈಗೊಳ್ಳಲಿದೆ.
ಹೊಸ ಹುದ್ದೆ ಸೃಜಿಸುವ ಅಗತ್ಯತೆ ಬಗ್ಗೆ ರಾಜ್ಯದ ನಾಲ್ಕು ವಿಭಾಗಗಳ 32 ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಿಕೊಂಡಿದೆ. ಸಮಿತಿ ಹುದ್ದೆ ಸೃಜನೆ ಕುರಿತು ಕಾರ್ಯಾಧ್ಯಯನ ನಡೆಸಿ ಸೂಕ್ತ ಸಮರ್ಥನೆಯೊಂದಿಗೆ ಪರಿಪೂರ್ಣ ವರದಿ ಸಲ್ಲಿಸಲಿದೆ.
ಕರ್ನಾಟಕ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಗ್ರಾಮ ಪಂಚಾಯಿತಿಗಳ ಸುಲಲಿತ ಆಡಳಿತ ನಿರ್ವಹಣೆಗೆ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆ ಸೃಜಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದವು.