

ಶಿವಮೊಗ್ಗ: ಹೊಸದಾಗಿ ಉದ್ಯಮ ಆರಂಭಿಸುವವರಿಗೆ ಸಮರ್ಪಕ ಮಾರ್ಗದರ್ಶನ ನೀಡುವ ಜತೆಗೆ ಅದಕ್ಕೆ ಹೂಡಿಕೆದಾರರನ್ನೂ ಹೊಂದಿಸುವ ನಿಟ್ಟಿನಲ್ಲಿ ಅನ್ವೇಷಣ ಫೋರಂ ರಚನೆಯಾಗಿದ್ದು, ಸೆ.9ರ ಬೆಳಗ್ಗೆ 10ಕ್ಕೆ ಪೆಸಿಟ್ ಕಾಲೇಜಿನಲ್ಲಿ ಇದರ ಉದ್ಘಾಟನೆ ನೆರವೇರಲಿದೆ ಎಂದು ಪ್ರೇರಣಾ ಎಜುಕೇಷನ್ ಸೊಸೈಟಿಯ ಮ್ಯಾನೇಜಿಂಗ್ ಟ್ರಸ್ಟಿ ಬಿ.ವೈ. ರಾಘವೇಂದ್ರ ತಿಳಿಸಿದರು.
ವಿಟಿಯು ಕುಲಪತಿ ಡಾ. ಎಸ್.ವಿದ್ಯಾಶಂಕರ್, ಪಿಇಎಸ್ ಟ್ರಸ್ಟ್‌ನ ಟ್ರಸ್ಟಿ ಬಿ.ವೈ. ವಿಜಯೇಂದ್ರ, ಉದ್ಯಮಿ ಪ್ರಶಾಂತ್ ಪ್ರಕಾಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪೆಸಿಟ್ ಕ್ಯಾಂಪಸ್‌ನಲ್ಲಿ ಅನ್ವೇಷಣ ಫೋರಂ ಕಾರ್ಯನಿರ್ವಹಿಸಲಿದ್ದು, ಇದರ ಮೂಲಕ ಸ್ಟಾರ್ಟಪ್ ಕಂಪನಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಲಾಗುವುದು. ನವೋದ್ಯಮಿಗಳಿಗೆ ಹೊಸ ಅವಕಾಶಗಳು, ಮಾರುಕಟ್ಟೆ ತಂತ್ರಜ್ಞಾನ ಒದಗಿಸಲಾಗುವುದು. ಮಲೆನಾಡು ಮಾತ್ರವಲ್ಲದೆ ಮಧ್ಯಕರ್ನಾಟಕ ಭಾಗದಲ್ಲಿ ಇದೊಂದು ಹೊಸ ಪ್ರಯತ್ನ. ಈಗಾಗಲೇ 250ಕ್ಕೂ ಹೆಚ್ಚು ಮಂದಿ ಇದರಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ ಎಂದರು.
20ಕ್ಕೂ ಹೆಚ್ಚು ಸಂಪನ್ಮೂಲ ವ್ಯಕ್ತಿಗಳು, 25ಕ್ಕೂ ಹೆಚ್ಚು ಹೂಡಿಕೆದಾರರು, ಸ್ಥಳೀಯವಾದ 50ಕ್ಕೂ ಹೆಚ್ಚು ಸಣ್ಣ ವ್ಯಾಪಾರಿಗಳು, 60ಕ್ಕೂ ಹೆಚ್ಚು ಸ್ಟಾರ್ಟಪ್ ಕಂಪನಿಗಳನ್ನು ಆರಂಭಿಸಿದವರು ಇದರಲ್ಲಿ ಭಾಗವಹಿಸಲಿದ್ದಾರೆ. 20ಕ್ಕೂ ಹೆಚ್ಚು ಸಾರ್ಟಪ್ ಕಂಪನಿಗಳು ಅವರ ಸಂಶೋಧನೆ ಹಾಗೂ ಉತ್ಪನ್ನಗಳನ್ನು ಇಲ್ಲಿ ಪ್ರದರ್ಶಿಸಲಿದ್ದಾರೆ ಎಂದು ಹೇಳಿದರು.
ಈಗಾಗಲೆ ಶಿವಮೊಗ್ಗದಲ್ಲಿ ಎಲ್ಲ ರೀತಿಯ ಮೂಲ ಸೌಕರ್ಯ, ಸಂಪರ್ಕ ವ್ಯವಸ್ಥೆಗಳು ಹೊಸ ಉದ್ಯಮಗಳ ಆರಂಭಕ್ಕೆ ಪೂರಕವಾಗಿವೆ. ಇಂದು ಅನೇಕರು ಹೊಸ ಚಿಂತನೆಗಳೊಂದಿಗೆ ನವೋದ್ಯಮಿಗಳಾಗಲು ಮುಂದೆ ಬರುತ್ತಿದ್ದಾರೆ. ನಿರಂತರವಾಗಿ ಅವರಿಗೆ ಅಗತ್ಯ ಮಾಹಿತಿ ಒದಗಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದರು.
ಪೆಸಿಟ್ ಟ್ರಸ್ಟಿ ಬಿ.ಆರ್.ಸುಭಾಷ್, ಮುಖ್ಯ ಆಡಳಿತಾಧಿಕಾರಿ ಡಾ. ಆರ್.ನಾಗರಾಜ್, ಕೃಷಿ ಕಲ್ಪದ ಸಿಇಒ ಸಿ.ಎಂ.ಪಾಟೀಲ್ ಸುದ್ದಿಗೋಷ್ಠಿಯಲ್ಲಿದ್ದರು.