

ಶಿಕಾರಿಪುರ: ಧಾರ್ಮಿಕ ಕಾರ್ಯಕ್ರಮಗಳಿಂದ ಸನ್ಮಾರ್ಗ ಮತ್ತು ಸದ್ವಿಚಾರಗಳು ನಮ್ಮಲ್ಲಿ ಸೃಜಿಸುತ್ತವೆ. ನಮ್ಮನ್ನು ಸದಾ ಧರ್ಮ ಮಾರ್ಗದಲ್ಲಿ ಸಾಗುವಂತೆ ಪ್ರೇರೇಪಿಸುತ್ತವೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಶ್ರೀಮಾರಿಕಾಂಬಾ ಬಯಲು ರಂಗಮಂದಿರದಲ್ಲಿ ಶ್ರೀ ವಿನಾಯಕ ಸೇವಾ ಸಮಿತಿ ಆಯೋಜಿಸಿದ್ದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಣೇಶೋತ್ಸವದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಅತ್ಯಂತ ಅದ್ದೂರಿ, ಶಾಂತಿಯುತವಾಗಿ ನಡೆಯಬೇಕು. ಶಾಂತಿ ಸೌಹಾರ್ದಕ್ಕೆ ಈ ಹಬ್ಬ ಸಾಕ್ಷಿಯಾಗಬೇಕು ಎಂದರು.
ಎಲ್ಲ ಧಾರ್ಮಿಕ ಕಾರ್ಯಕ್ರಮಗಳು, ಹಬ್ಬ, ಜಾತ್ರೆ, ಉತ್ಸವಗಳ ಮೂಲ ಉದ್ದೇಶ ಲೋಕಕಲ್ಯಾಣ ಮತ್ತು ಹಿಂದು ಧರ್ಮದ ಆಚಾರ ವಿಚಾರ, ಸಂಪ್ರದಾಯ, ಸಂಸ್ಕೃತಿ ಮತ್ತು ಪರಂಪರೆಗಳನ್ನು ಉಳಿಸುವುದೇ ಆಗಿದೆ. ಧರ್ಮ ಮಾರ್ಗವೆಂದರೆ ಅದು ರಾಜಮಾರ್ಗ. ನಾವು ಧರ್ಮದ ರಕ್ಷಣೆ ಮಾಡಿದರೆ ಅದು ನಮಗೆ ನೆರಳಾಗಿ ನಿಲ್ಲುತ್ತದೆ. ವಿವಿಧ ಸಂಘ ಸಂಸ್ಥೆಗಳು ಸಡಗರ ಸಂಭ್ರಮದಿಂದ ಗಣೇಶೋತ್ಸವ ಆಚರಿಸುತ್ತಿವೆ. ಪ್ರತಿ ಗಲ್ಲಿ ಗಲ್ಲಿಯಲ್ಲಿಯೂ ಗಣೇಶನನ್ನು ಪ್ರತಿಷ್ಠಾಪಿಸಿ, ಶ್ರದ್ಧಾಭಕ್ತಿಯಿಂದ ಪೂಜಿಸಲಾಗುತ್ತಿದೆ ಎಂದರು.
ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಹುಲ್ಮಾರ್ ಮಹೇಶ್, ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಪುರಸಭೆ ಅಧ್ಯಕ್ಷೆ ಶೈಲಾ ಮಡ್ಡಿ , ಉಪಾಧ್ಯಕ್ಷೆ ರೂಪಾ ಮಂಜುನಾಥ್, ತಹಸೀಲ್ದಾರ್ ಮಲ್ಲೇಶ್ ಬಿ ಪೂಜಾರ್, ಬಿಇಒ ಲೋಕೇಶಪ್ಪ, ಚನ್ನವೀರಪ್ಪ, ವಸಂತ ಗೌಡರು, ಉಳ್ಳಿ ದರ್ಶನ್, ರೋಶನ್, ಕಮಲಮ್ಮ ಹುಲ್ಮಾರ್, ಶೇಖರ್ ಹುಲ್ಮಾರ್, ಸೇವಾ ಸಮಿತಿ ಉಪಾಧ್ಯಕ್ಷ ಚೌಟಗಿ ಉಮೇಶ್, ಪರಶುರಾಮ್, ಮಾಲತೇಶ್, ಪಾಂಡು ಇತರರಿದ್ದರು.