ನಿರಂತರ ಅಧ್ಯಯನದಿಂದ ಉತ್ಕೃಷ್ಟ ಸಾಹಿತ್ಯ ರಚನೆ

sahitya
ಶಿವಮೊಗ್ಗದಲ್ಲಿ ಆಯೋಜಿಸಿದ್ದ ಸಾಹಿತ್ಯ ರಚನಾ ಕಮ್ಮಟವನ್ನು ರಾಮಕೃಷ್ಣ ವಿದ್ಯಾನಿಕೇತನ ಸಂಸ್ಥೆ ಅಧ್ಯಕ್ಷ ಡಾ. ಡಿ.ಆರ್.ನಾಗೇಶ್ ಉದ್ಘಾಟಿಸಿದರು. ಶೋಭಾ ವೆಂಕಟರಮಣ, ಬಿ.ಚಂದ್ರೇಗೌಡ, ಡಿ.ಮಂಜುನಾಥ್, ಡಾ. ಎಚ್.ಟಿ.ಕೃಷ್ಣಮೂರ್ತಿ ಇತರರಿದ್ದರು.
Published on

ಶಿವಮೊಗ್ಗ: ಯಾವುದೇ ಸಾಧನೆಗೆ ತರಬೇತಿ ಅವಶ್ಯಕ. ನಿರಂತರ ಅಧ್ಯಯನ ಮತ್ತು ಮಾರ್ಗದರ್ಶನದಿಂದ ಅದ್ಭುತ ಸಾಹಿತ್ಯ ಕೃಷಿ ಸಾಧ್ಯ ಎಂದು ರಾಮಕೃಷ್ಣ ವಿದ್ಯಾನಿಕೇತನ ಸಂಸ್ಥೆ ಅಧ್ಯಕ್ಷ ಡಾ. ಡಿ.ಆರ್.ನಾಗೇಶ್ ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ರಾಮಕೃಷ್ಣ ವಿದ್ಯಾನಿಕೇತನ ಸಂಸ್ಥೆಯಿಂದ ಮಂಗಳವಾರ ಏರ್ಪಡಿಸಿದ್ದ ಒಂದು ದಿನದ ಸಾಹಿತ್ಯ ರಚನಾ ಕಮ್ಮಟ ಉದ್ಘಾಟಿಸಿ ಮಾತನಾಡಿದ ಅವರು, ಬರೆಯುವ ಪ್ರತಿಯೊಬ್ಬರಿಗೂ ಓದು, ಮಾರ್ಗದರ್ಶನ, ಅನುಭವ ಎಲ್ಲವೂ ಹಿನ್ನೆಲೆಯಾಗಿರಬೇಕು. ಕಲಿಯುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ, ಅದು ಸಿಕ್ಕಾಗ ಬಳಸಿಕೊಳ್ಳಬೇಕು ಎಂದರು.

ಅಂಕಣಕಾರ ಬಿ.ಚಂದ್ರೇಗೌಡ ಮಾತನಾಡಿ, ಮನುಷ್ಯನ ನಡವಳಿಕೆ ಪರಿಸರ ನಾಶಕ್ಕೆ ಕಾರಣವಾಗಿದೆ. ಇವತ್ತಿನ ಶಿಕ್ಷಣ ವ್ಯವಸ್ಥೆ ಹಾಗೂ ಮುಂದಿನ ದಿನಗಳಲ್ಲಿ ಕನ್ನಡ ಭಾಷೆ, ಸಾಹಿತ್ಯಕ್ಕೆ ಎದುರಾಗುವ ಸವಾಲುಗಳನ್ನು ಎದುರಿಸಲು ಇಂತಹ ಕಮ್ಮಟಗಳು ಯುವ ಸಮೂಹಕ್ಕೆ ಅಗತ್ಯ ಎಂದು ಹೇಳಿದರು.

ರಾಮಕೃಷ್ಣ ವಿದ್ಯಾನಿಕೇತನದ ಕಾರ್ಯದರ್ಶಿ ಶೋಭಾ ವೆಂಕಟರಮಣ ಮಾತನಾಡಿ, ಸೃಜನಶೀಲ ಮನಸ್ಸುಗಳಿಗೆ ಕಮ್ಮಟ ದಾರಿದೀಪ ಎಂದು ಅಭಿಪ್ರಾಯಪಟ್ಟರು. ಕಾವ್ಯ ಪ್ರಕಾರ ಕುರಿತು ಸಾಹಿತಿ ಡಾ. ಎಚ್.ಟಿ.ಕೃಷ್ಣಮೂರ್ತಿ, ಕಥಾ ಪ್ರಕಾರ ಕುರಿತು ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಮಾರ್ಗದರ್ಶನ ನೀಡಿದರು.

ಮುಖ್ಯ ಶಿಕ್ಷಕ ತೀರ್ಥೇಶ್, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಪ್ರಧಾನ ಕಾರ್ಯದರ್ಶಿ ಶಿವಪ್ಪಗೌಡ, ಕಸಾಪ ಜಿಲ್ಲಾ ಕಾರ್ಯದರ್ಶಿ ಡಿ.ಗಣೇಶ್, ಕನ್ನಡ ಜಾನಪದ ಪರಿಷತ್ ಜಿಲ್ಲಾ ಕಾರ್ಯದರ್ಶಿ ಬಾಲರಾಜ್, ಉಪನ್ಯಾಸಕಿ ವಂದನಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net