ಪಂಚಾಯಿತಿ ಮಟ್ಟದಲ್ಲಿ ಮಕ್ಕಳ ರಕ್ಷಣಾ ಸಮಿತಿ ರಚಿಸಿ; ಆಯೋಗದ ಸದಸ್ಯ ವೆಂಕಟೇಶ್ ಸೂಚನೆ

makkala hakkugala rakshana ayoga
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಕ್ಕಳ ರಕ್ಷಣಾ ಹಕ್ಕುಗಳ ಆಯೋಗದ ಸದಸ್ಯರು ಸಭೆ ನಡೆಸಿದರು. ಆಯೋಗದ ಸದಸ್ಯರಾದ ವೆಂಕಟೇಶ್, ಎಸ್.ಮಂಜು, ಡಾ. ಕೆ.ಟಿ.ತಿಪ್ಪೇಸ್ವಾಮಿ, ಡಿಸಿ ಡಾ. ಆರ್.ಸೆಲ್ವಮಣಿ, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಜಿಪಂ ಸಿಇಒ ಸ್ನೇಹಲ್ ಲೋಖಂಡೆ ಇದ್ದರು.
Published on

ಶಿವಮೊಗ್ಗ: ಪಂಚಾಯಿತಿ ಮಟ್ಟದಲ್ಲಿ ಮಕ್ಕಳ ರಕ್ಷಣಾ ಸಮಿತಿಗಳನ್ನು ರಚಿಸಿ ಅವರ ರಕ್ಷಣೆಗೆ ಒತ್ತು ನೀಡಬೇಕು. ಅಲ್ಲಿನ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಲು ಕ್ರಮ ಕೈಗೊಳ್ಳುವಂತೆ ಜಿಪಂ ಸಿಇಒ ಸ್ನೇಹಲ್ ಲೋಖಂಡೆ ಅವರಿಗೆ ಮಕ್ಕಳ ರಕ್ಷಣಾ ಹಕ್ಕುಗಳ ಆಯೋಗದ ಸದಸ್ಯ ವೆಂಕಟೇಶ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿ, ಜಿಲ್ಲೆಯ ಖಾಸಗಿ ವಸತಿ ಶಿಕ್ಷಣ ಸಂಸ್ಥೆಗಳ ಆಡಳಿತ ಪ್ರತಿನಿಧಿಗಳೊಂದಿಗೆ ಅಹಿತಕರ ಘಟನೆಗಳಾಗದಂತೆ ಕ್ರಮ ವಹಿಸಲು ಶೀಘ್ರ ಸಭೆ ಆಯೋಜಿಸಬೇಕು. ವಸತಿ ಶಾಲೆಗಳ ಶಿಕ್ಷಕರಿಗೆ ಪೋಕ್ಸೋ ಮತ್ತು ಜೆಜೆ ಆ್ಯಕ್ಟ್‌ನ ಕುರಿತು ಮಾಹಿತಿ ಒದಗಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಮಕ್ಕಳ ಮೇಲೆ ನಡೆಯುವ ಘಟನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಸಕಾಲದಲ್ಲಿ ಅಗತ್ಯ ಕ್ರಮ ವಹಿಸುವಂತೆ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಅವರಿಗೆ ಸೂಚಿಸಿದ ಅವರು, ಸಾಗರದ ವನಶ್ರೀ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿ ಸಾವಿನ ಬಳಿಕ ಈವರೆಗೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.
ಪ್ರಸ್ತುತ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಸುರಕ್ಷತೆ ಹಾಗೂ ಭವಿಷ್ಯದ ದೃಷ್ಟಿಯಿಂದ ಮಕ್ಕಳ ಪಾಲಕರ ಅನುಮತಿ ಪಡೆದು ಸಮೀಪದ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ತಂಗಿದ್ದು ಶೈಕ್ಷಣಿಕ ಚಟುವಟಿಕೆ ಮುಂದುವರಿಸಲು ಕ್ರಮ ವಹಿಸಬೇಕು. ಈ ಶಿಕ್ಷಣ ಸಂಸ್ಥೆಯಲ್ಲಿ ನೆರೆ ರಾಜ್ಯದ ಇಬ್ಬರು ವಿದ್ಯಾರ್ಥಿಗಳಿದ್ದು ಅವರ ಸುರಕ್ಷತೆ ಮತ್ತು ಶಿಕ್ಷಣಕ್ಕೆ ಗಮನಹರಿಸಬೇಕು. ಅಗತ್ಯವಿದ್ದಲ್ಲಿ ಅವರನ್ನು ತಮ್ಮ ಹುಟ್ಟೂರಿಗೆ ಕಳುಹಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ವನಶ್ರೀ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎಲ್ಲ ಮಕ್ಕಳ ಸ್ಥಿತಿಗತಿಗಳ ಸಮಗ್ರ ವರದಿ ಸಲ್ಲಿಸಬೇಕು. ಈ ವರದಿಯ ಆಧಾರದ ಮೇಲೆ ಮಕ್ಕಳಿಗೆ ಸರ್ಕಾರದ ಸೌಲಭ್ಯಗಳನ್ನು ದೊರಕಿಸಲು ಸಾಧ್ಯವಾಗಲಿದೆ. ಈ ಘಟನೆಯ ವಾಸ್ತವಾಂಶ ಅರಿತು ಕ್ರಮ ಕೈಗೊಳ್ಳಲು ಕೂಡಲೇ ತನಿಖಾ ಸಮಿತಿ ರಚಿಸುವಂತೆ ಸೂಚಿಸಿದರು.
ಮಕ್ಕಳ ರಕ್ಷಣಾ ಆಯೋಗದ ಸದಸ್ಯರಾದ ಎಸ್.ಮಂಜು, ಡಾ. ಕೆ.ಟಿ.ತಿಪ್ಪೇಸ್ವಾಮಿ, ಜಿಪಂ ಸಿಇಒ ಸ್ನೇಹಲ್ ಲೋಖಂಡೆ, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಆರ್‌ಸಿಎಚ್‌ಒ ಡಾ. ನಾಗರಾಜ್ ನಾಯ್ಕ, ಡಾ. ಮಲ್ಲಿಕಾರ್ಜುನ ಗೌಡ, ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ಸಮಾಜ ಕಲ್ಯಾಣಾಧಿಕಾರಿ ಶ್ರೀನಿವಾಸ್, ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಶೋಭಾ, ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷೆ ಜಿ.ಎಂ.ರೇಖಾ ಉಪಸ್ಥಿತರಿದ್ದರು.
ವಸತಿ ಶಾಲೆ ಮಾನ್ಯತೆ ರದ್ದು: ಡಿಸಿ
ಘಟನೆಯ ನಂತರ ವಸತಿ ಶಾಲೆಗೆ ನೀಡಲಾಗಿದ್ದ ಮಾನ್ಯತೆಯನ್ನು ರದ್ದುಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ತಿಳಿಸಿದರು. ಈ ಘಟನೆಗೆ ಮುನ್ನವೇ ಜಿಲ್ಲೆಯಲ್ಲಿನ ಖಾಸಗಿ ವಸತಿ ಶಿಕ್ಷಣ ಸಂಸ್ಥೆಗಳ ಕುರಿತು ಗಮನಹರಿಸಲು ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಅವರಿಂದ ಕಾಲಕಾಲಕ್ಕೆ ಮಾಹಿತಿ ಪಡೆಯಲಾಗುತ್ತಿದೆ ಎಂದರು. ಮೃತ ವಿದ್ಯಾರ್ಥಿನಿಯ ಪಾಲಕರಿಗೆ ಪರಿಹಾರ ಧನ ವಿತರಿಸಲಾಗುವುದು. ಖಾಸಗಿ ಶಿಕ್ಷಣ ಸಂಸ್ಥೆಗಳು ಜೆಜೆ ಆ್ಯಕ್ಟ್‌ನಡಿ ನೋಂದಾಯಿಸಿಕೊಳ್ಳಲು ಕಾನೂನನ್ನು ರೂಪಿಸಿ ಅನುಷ್ಠಾನಕ್ಕೆ ತರುವ ಅಗತ್ಯವಿದೆ ಎಂದರು. ತಂಡದ ಸದಸ್ಯರು ಘಟನೆ ನಡೆದ ವಸತಿ ಶಾಲೆಗೆ ಭೇಟಿ ಅಲ್ಲಿನ ಸ್ಥಿತಿಗತಿಗಳನ್ನು ಖುದ್ದು ಪರಿಶೀಲಿಸಿ, ಅಲ್ಲಿನ ನ್ಯೂನತೆಗಳನ್ನು ಗಮನಿಸಿದ್ದಾರೆ. ವಿಶೇಷವಾಗಿ ಮೂಲ ಸೌಕರ್ಯಗಳ ಕೊರತೆ, ವಸತಿ ಸಮಸ್ಯೆ, ಕಲಿಕಾ ಸಾಮಗ್ರಿಗಳ ಕೊರತೆ, ಸುರಕ್ಷತಾ ಕ್ರಮಗಳು ಇಲ್ಲದಿರುವುದು, ದಿನಂಪೂರ್ತಿ ಕಾರ್ಯನಿರ್ವಹಿಸಲು ಮಹಿಳಾ ಸಿಬ್ಬಂದಿ ಇಲ್ಲದಿರುವುದು ಸೇರಿ ಅನೇಕ ವಿಷಯಗಳನ್ನು ಗಮನಿಸಿದೆ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net