ಜಾನಪದ ಕಲೆಗಳ ಅರಿವು ಮೂಡಿಸಿ

25ckm4- janapada must
ಚಿಕ್ಕಮಗಳೂರಲ್ಲಿ ಆಯೋಜಿಸಿದ್ದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ಉದ್ಘಾಟಿಸಿದರು. ಜಿ.ಬಿ.ಸುರೇಶ್, ಗೌರಮ್ಮ, ನಟರಾಜ್, ನವೀನ್, ಜಯಶೀಲ, ಜ್ಞಾನಮೂರ್ತಿ ಇತರರಿದ್ದರು.
Published on

ಚಿಕ್ಕಮಗಳೂರು: ಜಾನಪದ ಕಲೆಗಳು ನೆಲದ ಆಚಾರ, ವಿಚಾರಗಳ ಬಗ್ಗೆ ಅರಿವು ಮೂಡಿಸುತ್ತಿದ್ದು, ಇವುಗಳನ್ನು ಮುಂದಿನ ಪೀಳಿಗೆ ಆರ್ಥೈಸುವ ಕೆಲಸವಾಗಬೇಕಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ನಾರಣಾಪುರದಲ್ಲಿ ಕರ್ನಾಟಕ ಜಾನಪದ ಪರಿಷತ್‌ನಿಂದ ಇತ್ತೀಚಿಗೆ ಆಯೋಜಿಸಿದ್ದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತೀಯ ಸಂಸ್ಕೃತಿಯ ತಾಯಿ ಬೇರು ಜಾನಪದ, ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಜಾನಪದ ಕಲೆಗಳ ಬಗ್ಗೆ ತರಬೇತಿ ನೀಡಿದಾಗ ನೆಲದ ಸಂಸ್ಕೃತಿ ಕಾಪಾಡಲು ಸಾಧ್ಯ ಎಂದರು.
ಸರ್ಕಾರ ಜಾನಪದ ಕಲಾವಿದರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಎಲೆಮರೆ ಕಾಯಿಯಂತೆ ಬದುಕುತ್ತಿರುವ ಕಲಾವಿದರನ್ನು ಗುರುತಿಸುವ ಕೆಲಸ ಮಾಡಬೇಕು. ಕಲೆ, ಸಾಹಿತ್ಯ, ಸಂಗೀತಕ್ಕೆ ವಿಶೇಷ ಪ್ರೋತ್ಸಾಹ ನೀಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ, ಸಮಾಜದ ಹುಟ್ಟು, ಬೆಳವಣಿಗೆ, ನಿಯಮಗಳು, ಆಚರಣೆ, ಧಾರ್ಮಿಕ ಪದ್ಧತಿ ಮುಂತಾದವುಗಳಿಗೆ ರೂಪ ಕೊಟ್ಟಿರುವುದೇ ಜಾನಪದ. ಜಾನಪದ ಸಂಸ್ಕೃತಿ ಭಾರತೀಯ ಸಂಸ್ಕೃತಿ, ಅದು ಶಾಶ್ವತವಾಗಿ ಉಳಿಯಬೇಕಾದರೆ ಅದನ್ನು ಇಂದಿನ ಪೀಳಿಗೆ ಮೈಗೂಡಿಸಿಕೊಳ್ಳಬೇಕು. ಸರ್ಕಾರ ಜಾನಪದ ಕಡೆ ಮುಖಮಾಡಬೇಕು ಎಂದು ಸಲಹೆ ನೀಡಿದರು.
ರಂಗ ಸಂಘಟಕ ಎ.ಸಿ.ಚಂದ್ರಪ್ಪ ಜಾನಪದ ಧ್ವಜಾರೋಹಣ ನೆರವೇರಿಸಿದರು. ಗಾಯಕಾರದ ಎ.ಆರ್.ನಾಗೇಶ್, ಶಕುಂತಲಮ್ಮ ತಂಡದಿಂದ ಜಾನಪದ ಗೀತೆಗಳ ಗಾಯನ ನಡೆಯಿತು. ವೀರಗಾಸೆ ಕಲಾವಿದ ಡಾ.ಮಾಳೇನಹಳ್ಳಿ ಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ಇ.ಮಹಾಲಿಂಗಪ್ಪ, ಪರಿಷತ್‌ನ ಉಪಾಧ್ಯಕ್ಷ ಜಿ.ಎಸ್.ತಿಪ್ಪೇಶ್, ಗ್ರಾಪಂ ಅಧ್ಯಕ್ಷೆ ಗೌರಮ್ಮ, ಸದಸ್ಯರಾದ ನಟರಾಜ್, ನವೀನ್, ಜಯಶೀಲ, ಜ್ಞಾನಮೂರ್ತಿ, ಬೆಣಕುಣಸೆ ಮರುಳಸಿದ್ಧಪ್ಪ, ಮುಗುಳಿ ಲಕ್ಷ್ಮೀದೇವಮ್ಮ, ಗಂಗಾಧರಯ್ಯ, ಹಾಲಯ್ಯ, ಎಚ್.ಆರ್.ಚಂದ್ರಪ್ಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net