

ಬೀರೂರು: ವಾಹನ ಸವಾರರು ಮತ್ತು ಮಾಲೀಕರು ಸಂಚಾರದಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಶಿಸ್ತು ಮತ್ತು ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಶಿಸ್ತಿನ ಸಂಚಾರ, ಸುಗಮ ಸಂಚಾರಕ್ಕೆ ಹಾದಿ ಎಂದು ಬೀರೂರು ಪೊಲೀಸ್ ಠಾಣೆ ಪಿಎಸ್‌ಐ ಸಜಿತ್ ಕುಮಾರ್ ಹೇಳಿದರು.
ಖಾಸಗಿ ಬಸ್‌ನಿಲ್ದಾಣದಲ್ಲಿ ಶುಕ್ರವಾರ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ, ಅನೇಕ ರಸ್ತೆ ಅಪಘಾತಗಳು ನಮ್ಮ ತಪ್ಪುಗಳಿಂದ ಆಗುತ್ತವೆ. ಚಾಲಕರು ವಾಹನದಲ್ಲಿ ಕುಳಿತ ಕೂಡಲೇ ತಮ್ಮ ಕುಟುಂಬ ಮತ್ತು ಅವಲಂಬಿತರನ್ನು ಜ್ಞಾಪಕ ಮಾಡಿಕೊಳ್ಳಬೇಕು. ದ್ವಿಚಕ್ರ ಸವಾರರು ಹೆಲ್ಮೆಟ್ ಕೈಲಿಡಿದು ನಂತರ ವಾಹನ ಏರಬೇಕು. ಅಪಘಾತ ಸಂಭವಿಸಿದಲ್ಲಿ ಹೆಲ್ಮೆಟ್ ಜೀವ ರಕ್ಷಣೆ ಮಾಡುತ್ತದೆ. ಎಲ್ಲಕ್ಕಿಂತ ಜೀವ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕುಡಿದು ವಾಹನ ಚಾಲನೆ ಮಾಡುವುದು, ಚಾಲನೆಯಲ್ಲಿ ಮೊಬೈಲ್ ಬಳಸಬಾರದು.ವಿದ್ಯಾರ್ಥಿಗಳು ಮನೆಯಲ್ಲಿದ್ದವರಿಗೆ ರಸ್ತೆ ಸಂಚಾರದ ಅರಿವು ಮೂಡಿಸಬೇಕು ಎಂದರು.
ವಿವಿಧ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಂದ ಬಿ.ಎಚ್.ರಸ್ತೆ, ಅಜ್ಜಂಪುರ ರಸ್ತೆ ಸೇರಿದಂತೆ ಹಲವು ಮುಖ್ಯರಸ್ತೆಗಳಲ್ಲಿ ರಸ್ತೆ ಸಂಚಾರದ ಅರಿವು ಮೂಡಿಸುವ ಜತೆಗೆ ಸಂಚಾರದ ಕಾನೂನು ಪಾಲನೆಯ ಘೋಷಣೆ ಕೂಗುತ್ತಾ ಜಾಥಾ ನಡೆಸಿದರು. ಖಾಸಗಿ ಬಸ್‌ನಿಲ್ದಾಣದಲ್ಲಿ ಮಕ್ಕಳಿಗೆ ರಸ್ತೆಯ ಸಂಚಾರದ ಉಲ್ಲಂಘನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಲಾಯಿತು.
ಪೊಲೀಸ್ ಅಪರಾಧ ವಿಭಾಗದ ಪಿಎಸ್‌ಐ ಮಂಜುಳಾ ಬಾಯಿ, ಎಎಸ್‌ಐ ನಾಗರಾಜ್, ಸಿಬ್ಬಂದಿಗಳಾದ ಕುಮಾರಸ್ವಾಮಿ, ಮಧು, ಓಂಕಾರಮೂರ್ತಿ, ಭೈರಪ್ಪ ಮತ್ತು ಶಾಲಾ ಶಿಕ್ಷಕರು ಇದ್ದರು.