

ಶಿವಮೊಗ್ಗ: ಭಾರತವು ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ, ನೀಲಿ ಕ್ರಾಂತಿ ಬಳಿಕ ಇದೀಗ ಸಮೃದ್ಧಿ ಕ್ರಾಂತಿಗೆ ಕಾಲಿಟ್ಟಿದೆ ಎಂದು ಬೆಂಗಳೂರು ಕೃಷಿ ತಂತ್ರಜ್ಞಾನ ಅನ್ವಯಿಕ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ವಿ.ವೆಂಕಟಸುಬ್ರಮಣಿಯನ್ ಹೇಳಿದರು.
ನವುಲೆಯ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಲ್ಲಿ ಗುರುವಾರ ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನಿಂದ ವಿಶ್ವ ಆಹಾರ ದಿನಾಚರಣೆ ಅಂಗವಾಗಿ ಕೃಷಿ ಯಾನ- ಪ್ರವಾಸೋದ್ಯಮ ಕೇಂದ್ರ ಹಾಗೂ ಸಹ್ಯಾದ್ರಿ ಆಹಾರೋತ್ಪನ್ನಗಳ ಮಾರಾಟ ಮಳಿಗೆ ಉದ್ಘಾಟಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಕಿಸಾನ್ ಸಮೃದ್ಧಿ ಕ್ರಾಂತಿಗೆ ಕರೆ ನೀಡಿದ್ದು, ಕೃಷಿ ಸಂಶೋಧನೆಗಳು ಆ ದಿಕ್ಕಿನಲ್ಲಿ ಸಾಗಬೇಕಿದೆ. ಕೃಷಿಯಲ್ಲಿನ ತಂತ್ರಜ್ಞಾನವು ರೈತರ ಉತ್ಪನ್ನಗಳ ಮಾರುಕಟ್ಟೆ ನೆರವಿಗೆ ಬರಬೇಕಿದೆ. ಈ ಮೂಲಕ ಕೃಷಿ ಲಾಭದಾಯಕವಾಗಬೇಕು. ಇದರಿಂದ ಯುವಜನರು ಕೂಡ ಕೃಷಿಯತ್ತ ಮುಖ ಮಾಡುವ ವಾತಾವರಣ ನಿರ್ಮಾಣವಾಗುತ್ತದೆ ಎಂದರು.
ಕೃಷಿಯಲ್ಲಿ ನಾವೀನ್ಯ ತಂತ್ರಜ್ಞಾನ ಅಳವಡಿಸಿಕೊಂಡು ಉಪ ಬೆಳೆಗಳನ್ನು ಬೆಳೆಯಬೇಕು. ಈ ಮೂಲಕ ಮಾಲ್ ಹಾಗೂ ಸೂಪರ್ ಮಾರ್ಕೆಟ್‌ಗಳಲ್ಲಿ ತಮ್ಮ ಸ್ಥಾನವನ್ನು ಪಡೆದು ಆರ್ಥಿಕವಾಗಿ ಸದೃಢರಾಗಬೇಕಿದೆ. ರೈತರ ಹಿತದೃಷ್ಟಿಯಿಂದ ಕೃಷಿ ವಿಶ್ವವಿದ್ಯಾಲಯವು ಹೊಸ ಉತ್ಪನ್ನಗಳನ್ನು ತಯಾರು ಮಾಡಲು ಅನೇಕ ಸೌಲಭ್ಯಗಳು ಹಾಗೂ ಸಹಕಾರವನ್ನು ನೀಡುತ್ತಿದೆ. ರೈತರು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಎಂ.ಕಿರಣ್‌ಕುಮಾರ್, ವ್ಯವಸ್ಥಾಪನಾ ಮಂಡಳಿ ಸದಸ್ಯ ಎಚ್.ಎಸ್.ಶಶಾಂಕ್, ಆಡಳಿತ ಮಂಡಳಿ ಸದಸ್ಯ ಎಚ್.ಡಿ.ದೇವಿಕುಮಾರ್, ಕೃಷಿ ವಿವಿ ಡೀನ್ ಡಾ. ಡಿ.ತಿಪ್ಪೇಶ್, ವಿಸ್ತರಣಾ ನಿರ್ದೇಶಕ ಜಿ.ಕೆ.ಗಿರೀಶ್, ಸಹ ವಿಸ್ತರಣಾ ನಿರ್ದೇಶಕ ಡಾ. ಬಿ.ಸಿ.ಹನುಮಂತಸ್ವಾಮಿ, ಶಿಕ್ಷಣ ನಿರ್ದೇಶಕ ಡಾ. ಹೇಮ್ಲಾ ನಾಯ್ಕ್ ಇತರರಿದ್ದರು.