ಸಿಪಿವೈ ಕಾಂಗ್ರೆಸ್‌ಗೆ ಹೋಗಬಾರದಿತ್ತು !

DR K Sudhakar
Published on

ಕೋಲಾರ: ಯೋಗೇಶ್ವರ್ ಅವರು ಚುನಾವಣೆಗಾಗಿ ಕಾಂಗ್ರೆಸ್‌ಗೆ ಹೋಗಿದ್ದಾರೆ. ಅವರಿಗಿದ್ದ ಕನಸುಗಳು ಬಿಜೆಪಿಯಲ್ಲಿದ್ದಿದ್ದರಷ್ಟೇ ನನಸಾಗುತ್ತಿದ್ದವು ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು.

ಜಿಲ್ಲೆಯ ಮುಳಬಾಗಿಲು ತಾಲೂಕಿನ ಆವಣಿ ಗ್ರಾಮದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಪಿ.ಯೋಗೇಶ್ವರ್ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ದೆಹಲಿ ಹಂತದ ಹೈಕಮಾಂಡ್‌ತನಕವೂ ಉತ್ತಮ ಸಂಬಂಧ ಹೊಂದಿದ್ದರು. ಅನೇಕ ಮುಖಂಡರ ನಡುವೆಯೂ ಸ್ನೇಹವಿತ್ತು. ನಾಮಪತ್ರ ಸಲ್ಲಿಸಲು ಇನ್ನೂ ಒಂದು ದಿನ ಬಾಕಿಯಿದ್ದು, ಕಾದು ನೋಡಬೇಕಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

ಸಿ.ಪಿ.ಯೋಗೇಶ್ವರ್ ಅವರು ರಾಜಕೀಯವಾಗಿ ಬಹಳ ಕನಸುಗಳನ್ನು ಇಟ್ಟುಕೊಂಡ ನಾಯಕ. ಕನಸು ನನಸು ಆಗಲು ಬಿಜೆಪಿಯಲ್ಲಿ ಇರಬೇಕಿತ್ತು. ಚುನಾವಣೆ ಗೋಸ್ಕರ ಕಾಂಗ್ರೆಸ್‌ಗೆ ಹೋಗಬಾರದಿತ್ತು. ಟಿಕೆಟ್ ವಿಚಾರವನ್ನು ನಾಮಪತ್ರ ಸಲ್ಲಿಕೆಯೆ ಕೊನೆ ಕ್ಷಣದವರೆಗೂ ತೆಗೆದುಕೊಂಡು ಹೋಗಬೇಕಿತ್ತು ಎಂದು ಸುಧಾಕರ್ ಹೇಳಿದರು.

ಯೋಗೇಶ್ವರ್ ಅವರು ಬಿಜೆಪಿಯಲ್ಲಿ ಇದ್ದಷ್ಟು ದಿನ ಪಕ್ಷ ಅವರನ್ನು ಗೌರವಯುತವಾಗಿ ನಡೆಸಿಕೊಂಡಿದೆ. ಸಚಿವ, ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಿದೆ. ನಾಯಕತ್ವಕ್ಕೆ ಗೌರವಕೊಟ್ಟಿದೆ. ಆತುರದಿಂದ ತೆಗೆದುಕೊಂಡ ನಿರ್ಧಾರದಿಂದ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಇದರಿಂದಾಗಿ ಚುನಾವಣೆ ಮೇಲೆ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ ಎಂದು ಸುಧಾಕರ್ ಸ್ಪಷ್ಟಪಡಿಸಿದರು.

ರಾಜಕಾರಣದಲ್ಲಿ ಕೆಲ ಸಮಯದಲ್ಲಿ ಏರುಪೇರು ಆಗುವುದು ಸಹಜ, ಶಿಗ್ಗಾಂವಿ ಮತ್ತು ಸಂಡೂರುನಲ್ಲಿ ಪಕ್ಷ ಬಲವಾಗಿದ್ದು, ಬಿಜೆಪಿ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಚನ್ನಪಟ್ಟಣದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಗೆದಿದ್ದರು, ನಂತರ ಕುಮಾರಸ್ವಾಮಿ ಗೆದಿದ್ದರು. ತೆರವಾದ ಸ್ಥಾನಕ್ಕೆ ಸ್ವಾಭಾವಿಕವಾಗಿ ಮೈತ್ರಿ ಯಾಗಿರುವುದರಿಂದ ಅವರಿಗೆ ಕೊಡಬೇಕಾಗಿತ್ತೆಂದು ಹೈಕಮಾಂಡ್‌ಗೆ ಅನಿಸಿದ್ದು ನಿಜ. ಯೋಗೇಶ್ವರ್ ಅವರಿಗೆ ಜೆಡಿಎಸ್‌ನಿಂದ ಟಿಕೆಟ್ ಕೊಡಲು ಸಿದ್ಧರಿದ್ದರು, ಆದರೆ ಯೋಗೇಶ್ವರ್ ಕಾದು ನೋಡಲಿಲ್ಲ ಎಂದು ಸುಧಾಕರ್ ಹೇಳಿದರು.

ಮೂರೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲುವು

ಚುನಾವಣೆ ಮತ್ತು ರಾಜಕಾರಣವನ್ನು ಲಾಸ್ಟ್ ಮಿನಿಟ್‌ವರೆಗೂ ತೆಗೆದುಕೊಂಡು ಹೋಗಬೇಕು. ಚನ್ನಪಟ್ಟಣದಲ್ಲಿ ಯೋಗೇಶ್ವರ್ ಪ್ರಭಾವವಿರುವುದು ಎಷ್ಟು ಸತ್ಯವೋ, ಕುಮಾರಣ್ಣ ಗೆದ್ದಿರುವುದೂ ಅಷ್ಟೇ ಸತ್ಯ. ಅಲ್ಲಿ ಅವರ ಶಕ್ತಿಯೂ ಇದೆ. ಜತೆಗೆ ಬಿಜೆಪಿ ಶಕ್ತಿಯೂ ಇದೆ. ಅನಿವಾರ್ಯವಾಗಿ ಮೈತ್ರಿಯನ್ನು ಪಾಲನೆ ಮಾಡಬೇಕಾಗಿದ್ದು, ಒಳ್ಳೆ ಅಭ್ಯರ್ಥಿಯನ್ನು ಕುಮಾರಸ್ವಾಮಿ ಅವರು ಆಯ್ಕೆ ಮಾಡುತ್ತಾರೆ. ಸಮಬಲದ ಪೈಪೋಟಿ ನೀಡುವುದರ ಜತೆಗೆ ಅಭ್ಯರ್ಥಿಯ ಗೆಲುವಿಗೆ ಎಲ್ಲ ರೀತಿಯ ಕ್ರಮವಹಿಸಲಾಗುವುದು. ಮೂರೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ನಮ್ಮ ಗೆಲುವು ಖಚಿತ ಎಂದು ಸಂಸದ ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು.

ದೇವೇಗೌಡರಷ್ಟೇ ಕುಟುಂಬ ರಾಜಕಾರಣ ಮಾಡಿದರೆ?

ಕುಟುಂಬ ರಾಜಕಾರಣ ವಿಚಾರವಾಗಿ ಕೇವಲ ಡಾ.ಮಂಜುನಾಥ್, ದೇವೇಗೌಡರ ಅವರ ಬಗ್ಗೆ ಹೇಳುತ್ತೀರಿ. ಕಷ್ಟಪಟ್ಟು ಮೇಲೆ ಬಂದಿರುವ ಬಡ ರೈತ ಕುಟುಂಬ. ನೆಹರು, ಇಂದಿರಾ ಗಾಂಧಿ, ರಾಹುಲ್ ಗಾಂದಿ, ಈಗ ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ಬಗ್ಗೆ ಏಕೆ ಹೇಳುವುದಿಲ್ಲ?. ಎಲ್ಲ ಕುಟುಂಬದಲ್ಲೂ ರಾಜಕೀಯ ಬಂದಿಲ್ವಾ?, ಈಗ ಸಿದ್ದರಾಮಯ್ಯ ಅವರ ಕುಟುಂಬದವರು ರಾಜಕೀಯದಲ್ಲಿಲ್ವಾ? ಕಾಂಗ್ರೆಸ್ ಅಽಕಾರವೆಲ್ಲ ಸೋನಿಯಾಗಾಂಧಿ ಅವರ ಕೈಯಲ್ಲಿದೆ. ಖರ್ಗೆಯವರ ತೀರ್ಮಾನ ಏನೂ ಆಗುವುದಿಲ್ಲ ಎಂದು ಸುಧಾಕರ್ ಲೇವಡಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net