ಸೈನಿಕನ ಲೆಕ್ಕಾಚಾರ ಉಲ್ಟಾ: ಸಚಿವ ಸ್ಥಾನ ವಂಚಿತ ಸಿಪಿವೈಗೆ ರಾಜಕೀಯ ಹಿನ್ನಡೆ?

cpy_141017-1
Published on

ಚನ್ನಪಟ್ಟಣ : ನೂತನ ಸಂಪುಟದಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ಗೆ ಸ್ಥಾನ ದಕ್ಕದಿರುವುದು ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರಿಗೆ ನಿರಾಸೆ ಮೂಡಿಸಿದೆ.

ಈ ಹಿಂದೆ ಮೈತ್ರಿ ಸರ್ಕಾರವನ್ನು ಕೆಡವಿ ಬಿಜೆಪಿ ಸರ್ಕಾರದ ರಚನೆಯಲ್ಲಿ ಯೋಗೇಶ್ವರ್ ಪ್ರಮುಖ ಪಾತ್ರ ವಹಿಸಿದ್ದರು. ಆ ಸಮಯದಲ್ಲೇ ಇವರಿಗೆ ಸಚಿವ ಸ್ಥಾನ ಪಕ್ಕಾ ಎನ್ನಲಾಗಿತ್ತು. ಆದರೆ, ಅವಕಾಶದಿಂದ ವಂಚಿತರಾಗಿ ಮೇಲ್ಮನೆ ಸದಸ್ಯ ಸ್ಥಾನಕ್ಕೆ ತೃಪ್ತರಾಗಿದ್ದರು.

ತದನಂತರ ಸಂಪುಟ ವಿಸ್ತರಣೆ ವೇಳೆ ಹಲವು ರಾಜಕೀಯ ಮೇಲಾಟದ ನಡುವೆ ಕೊನೆಗೂ ಮಂತ್ರಿ ಸ್ಥಾನಗಿಟ್ಟಿಸಿ ಪ್ರವಾಸೋದ್ಯಮ ಸಚಿವರಾಗಿದ್ದರು. ನಂತರ ರಾಜಕೀಯ ಬೆಳವಣಿಗೆಯಲ್ಲಿ ಯಡಿಯೂರಪ್ಪ ವಿರುದ್ಧವೇ ಸಮರ ಸಾರಿದ್ದರು. ಇವೆಲ್ಲದರ ಮಧ್ಯೆ ಹೈಕಮಾಂಡ್ ಬೆಂಬಲದಿಂದ ನೂತನ ಸಚಿವ ಸಂಪುಟದಲ್ಲಿ ಪ್ರಬಲ ಖಾತೆ ಪಡೆಯಲಿದ್ದಾರೆ ಎನ್ನಲಾಗುತ್ತಿತ್ತು. ಈ ವಿಚಾರವಾಗಿ ಸ್ವತಃ ಯೋಗೇಶ್ವರ್ ಕೂಡ ವಿಶ್ವಾಸ ಹೊಂದಿದ್ದರು. ಇದೀಗ, ಲೆಕ್ಕಾಚಾರಗಳು ಉಲ್ಟಾ ಆಗಿವೆೆ.

ಪಕ್ಕಾ ಎನ್ನಲಾಗುತ್ತಿತ್ತು: ಹಳೇ ಮೈಸೂರು ಪ್ರಾಂತ್ಯದಲ್ಲಿ ಪಕ್ಷ ಬಲವರ್ಧನೆಗಾಗಿ ಹಾಗೂ ಜಿಲ್ಲೆಯ ಪ್ರಬಲ ವಿರೋಧ ಪಕ್ಷಗಳ ನಾಯಕರಾದ ಎಚ್.ಡಿ. ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್‌ಗೆ ಟಾಂಗ್ ಕೊಡಲು ಸಿಪಿವೈಗೆ ರಾಜಕೀಯ ಅಧಿಕಾರ ನೀಡಲಾಗುತ್ತದೆ ಎನ್ನಲಾಗುತ್ತಿತ್ತು. ಇದಲ್ಲದೇ ನಮ್ಮ ನಾಯಕರಿಗೆ ಹೈಕಮಾಂಡ್ ಆಶೀರ್ವಾದವಿದೆ. ಆ ಕಾರಣ ಮಂತ್ರಿಸ್ಥಾನ ಖಚಿತ ಎಂಬುದು ಬೆಂಬಲಿಗರ ಭರವಸೆೆಯಾಗಿತ್ತು. ಈ ಹಿಂದೆ ಮಂತ್ರಿ ಸ್ಥಾನ ದಕ್ಕಿದ್ದರೂ ಜಿಲ್ಲಾ ಉಸ್ತುವಾರಿ ಸಿಕ್ಕಿರಲಿಲ್ಲ. ಈ ಬಾರಿ ಉಸ್ತುವಾರಿ ಸ್ಥಾನದೊಂದಿಗೆ ಪ್ರಬಲ ಖಾತೆ ಒಲಿದು ಬರಲಿದೆ ಎಂದು ಸ್ವತಃ ಸಿಪಿವೈ ನಿರೀಕ್ಷೆಯಿಟ್ಟುಕೊಂಡಿದ್ದರು.

ರಾಜಕೀಯ ಹಿನ್ನಡೆ: ಸಿಪಿವೈಗೆ ಸಚಿವ ಸ್ಥಾನ ಕೈತಪ್ಪಿರುವುದು ರಾಜಕೀಯ ಹಾಗೂ ಪಕ್ಷದ ಹಿತದೃಷ್ಟಿಯಿಂದ ಸಾಕಷ್ಟು ಹಿನ್ನಡೆ ಎನ್ನಬಹುದು. ಒಂದೆಡೆ ಕ್ಷೇತ್ರದಲ್ಲಿ ಜೆಡಿಎಸ್‌ನ ಅಬ್ಬರ ಹಾಗೂ ಕಾಂಗ್ರೆಸ್‌ನ ಕಾಲೆಳೆಯುವಿಕೆ ಮಧ್ಯೆ ಸಿಗುವ ಸಚಿವ ಸ್ಥಾನ ಬಳಸಿಕೊಂಡು ಮುಂಬರುವ ಚುನಾವಣೆಯಲ್ಲಿ ಈಜಿ ದಡ ಸೇರುವ ಉದ್ದೇಶ ಅವರದ್ದಾಗಿತ್ತು. ಈ ಹಿಂದೆ ಸಿಕ್ಕ ಪದವಿಯನ್ನೂ ತಾಲೂಕಿನಲ್ಲಿ ಪಕ್ಷದ ಬಲವರ್ಧನೆಗೆ ಬಳಸಿಕೊಂಡಿದ್ದರು. ಜಿಲ್ಲೆಯ ಉಸ್ತುವಾರಿ ಜತೆಗೆ ಪ್ರಬಲ ಖಾತೆ ದಕ್ಕಲಿದ್ದು, ಅವೆಲ್ಲವುಗಳನ್ನು ಸಮರ್ಥವಾಗಿ ಬಳಸಿಕೊಂಡು, ಈ ಹಿಂದಿನ ಸೋಲಿನ ಕಹಿ ಮರೆಯುವ ಪ್ಲಾನ್ ರೂಪಿಸಿದ್ದರು.

ಯಡಿಯೂರಪ್ಪ ಅವರನ್ನು ಎದುರು ಹಾಕಿಕೊಳ್ಳುವ ಭರದಲ್ಲಿ ಇದೀಗ ತಮ್ಮ ಕುರ್ಚಿಗೂ ಕುತ್ತು ತಂದುಕೊಂಡಿದ್ದು, ಸಂಪುಟದಿಂದ ಹೊರಗುಳಿದಿದ್ದಾರೆ. ಮುಂಬರುವ ಜಿಪಂ ಹಾಗೂ ತಾಪಂ ಚುನಾವಣೆಯಲ್ಲೂ ಇದು ಪರಿಣಾಮ ಬೀರಲಿದೆ ಎನ್ನಬಹುದಾಗಿದೆ.

ಮುಂದಿನ ನಡೆಯೇನು?

ಸಿ.ಪಿ.ಯೋಗೇಶ್ವರ್ ಈ ಹಿಂದಿನಿಂದಲೂ ರೆಬಲ್ ಗುಣವುಳ್ಳ ನಾಯಕ ಎಂಬುದು ಜಗಜ್ಜಾಹೀರು. ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದಾಗ ಡಿ.ಕೆ.ಸಹೋದರರ ವಿರುದ್ಧ ಸೆಟೆದುಕೊಂಡು ಕಮಲ ಪಾಳಯ ಸೇರಿದ್ದರು. ಅಲ್ಲೂ ಯಡಿಯೂರಪ್ಪ ವಿರುದ್ಧ ಮೊದಲಿಗರಾಗಿ ಗುಟುರು ಹಾಕುವ ಮೂಲಕ ಬಂಡಾಯದ ಮನಸ್ಥಿತಿ ಹೊರಹಾಕಿದ್ದರು. ಇದೀಗ, ಅವರ ರಾಜಕೀಯ ಬೆಳವಣಿಗೆಗಳ ಬಗ್ಗೆ ಕುತೂಹಲ ಮೂಡಿದೆ. ಹಲವು ರಾಜಕೀಯ ಪಟ್ಟುಗಳನ್ನು ಕರಗತ ಮಾಡಿಕೊಂಡಿರುವ ಅವರ ಮುಂದಿನ ನಿರ್ಧಾರಗಳ ಬಗ್ಗೆ ಕಾಯ್ದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net