ಸಿಪಿಐ ನಾಯಕ ಸೀತಾರಾಂ ಯೆಚೂರಿ ಆರೋಗ್ಯ ಸ್ಥಿತಿ ಗಂಭೀರ, ವೆಂಟಿಲೇಟರ್​ನಲ್ಲಿ ಚಿಕಿತ್ಸೆ

s
Published on

ನವದೆಹಲಿ: ತೀವ್ರ ಶ್ವಾಸಕೋಶದ ಸೋಂಕಿನಿಂದಾಗಿ ದೆಹಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರ ಆರೋಗ್ಯ ಗಂಭೀರವಾಗಿದ್ದು, ಕೃತಕ ಉಸಿರಾಟದ ಬೆಂಬಲದಲ್ಲಿದ್ದಾರೆ ಎಂದು ಸಿಪಿಐ(ಎಂ) ತಿಳಿಸಿದೆ.

72 ವರ್ಷದ ಸೀತಾರಾಂ ಯೆಚೂರಿ ಅವರು ಉಸಿರಾಟದ ಬೆಂಬಲದಲ್ಲಿದ್ದಾರೆ. ವೈದ್ಯರ ತಂಡವು ಅವರ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ, ಅವರ ಆರೋಗ್ಯ ಸ್ಥಿತಿ ಈ ಸಮಯದಲ್ಲಿ ಗಂಭೀರವಾಗಿದೆ” ಎಂದು ಎಕ್ಸ್​ನಲ್ಲಿನ ಹೇಳಿಕೆಯಲ್ಲಿ ಸಿಪಿಐಎಂ ತಿಳಿಸಿದೆ.

ತೀವ್ರ ಜ್ವರದಿಂದ ಬಳಲುತ್ತಿರುವ ಸೀತಾರಾಂ ಯೆಚೂರಿ ಅವರನ್ನು ಆಗಸ್ಟ್ 19 ರಂದು ಏಮ್ಸ್​ನ ತುರ್ತು ವಿಭಾಗಕ್ಕೆ ದಾಖಲಿಸಲಾಗಿತ್ತು. ನ್ಯುಮೋನಿಯಾ ತರಹದ ಎದೆ ಸೋಂಕಿನ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಎಂದು ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ.

ಮೊದಲು ಅವರು ಚಿಕಿತ್ಸೆಗಾಗಿ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದರು. ಅವರನ್ನು ವೈದ್ಯರ ತಂಡ ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗಿತ್ತು. ಆದರೆ ಗುರುವಾರ ಯೆಚೂರಿ ಅವರ ಆರೋಗ್ಯ ಹದಗೆಟ್ಟ ನಂತರ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ಗೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.

ತುರ್ತು ಪರಿಸ್ಥಿತಿಯ  ವೇಳೆ ಬಂಧಿಸಲಾಗಿತ್ತು: ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (SFI) ಸದಸ್ಯರಾದ ಒಂದು ವರ್ಷದ ನಂತರ 1975 ರಲ್ಲಿ ಸೀತಾರಾಮ್ ಯೆಚೂರಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಗೆ ಸೇರಿದರು. ಜೆಎನ್‌ಯು ವಿದ್ಯಾರ್ಥಿಯಾಗಿದ್ದಾಗ ತುರ್ತು ಪರಿಸ್ಥಿತಿಯ ಸಮಯದಲ್ಲಿ ಅವರನ್ನು ಬಂಧಿಸಲಾಗಿತ್ತು. 1977 ಮತ್ತು 1988 ರ ನಡುವೆ ಮೂರು ಬಾರಿ ಜೆಎನ್‌ಯು ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 2004 ರಲ್ಲಿ ಯುಪಿಎ ಸರ್ಕಾರವನ್ನು ರಚಿಸುವಲ್ಲಿ ಸೀತಾರಾಂ ಯೆಚೂರಿ ಮಹತ್ವದ ಪಾತ್ರವನ್ನು ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net