

ಹೈದರಾಬಾದ್: ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೊಯಿಸ್ಟ್) ಹಾಗೂ ಅದರ ಏಳು ಅಂಗಸಂಸ್ಥೆಗಳನ್ನು ಒಂದು ವರ್ಷ ಕಾಲ ನಿಷೇಧಕ್ಕೊಳಪಡಿಸಲಾಗಿದೆ. ಇಂಥದ್ದೊಂದು ನಿಷೇಧ ಇದೇ ವರ್ಷದ ಆಗಸ್ಟ್ 17ರಿಂದಲೇ ಅನ್ವಯಿಸಲಿದೆ.
ಸಿಪಿಐ(ಎಂ) ಜತೆಗೆ ಅದರ ಅಂಗಸಂಸ್ಥೆಗಳಾದ ರೆವೊಲ್ಯುಷನರಿ ಡೆಮಾಕ್ರಟಿಕ್ ಫ್ರಂಟ್(ಆರ್ಡಿಎಫ್), ರ‍್ಯಾಡಿಕಲ್ ಯೂಥ್ ಲೀಗ್, ರಿಥು ಕೂಲಿ ಸಂಘಂ, ರ‍್ಯಾಡಿಕಲ್ ಸ್ಟುಡೆಂಟ್ಸ್ ಯೂನಿಯನ್, ಸಿಂಗರೇನಿ ಕಾರ್ಮಿಕ ಸಮಖ್ಯ, ವಿಪ್ಲವ ಕಾರ್ಮಿಕ ಸಮಖ್ಯ ಮತ್ತು ಆಲ್ ಇಂಡಿಯಾ ರೆವೊಲ್ಯುಷನರಿ ಸ್ಟುಡೆಂಟ್ಸ್ ಫೆಡರೇಷನ್ ಕೂಡ ನಿಷೇಧಕ್ಕೆ ಒಳಗಾಗಿವೆ.
ತೆಲಂಗಾಣ ರಾಜ್ಯದಲ್ಲಿ ಈ ನಿಷೇಧ ಹೇರಲಾಗಿದೆ ಎಂದು ಅಲ್ಲಿನ ಪಬ್ಲಿಕ್ ರಿಲೇಷನ್ಸ್ ಕಮಿಷನರ್ ಅರವಿಂದ್ ಕುಮಾರ್ ಮಾಹಿತಿ ನೀಡಿದ್ದಾರೆ. ಕಾನೂನುಬಾಹಿರ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಈ ನಿಷೇಧ ಹೇರಲಾಗಿದ್ದು, 2020ರ ಆಗಸ್ಟ್ 17ರಿಂದ ಒಂದು ವರ್ಷ ಈ ನಿಷೇಧ ಜಾರಿಯಲ್ಲಿರಲಿದೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್)