ಹಸುಗಳ ಕೆಚ್ಚಲು ಕೊಯ್ದ ದುರ್ಘಟನೆ: ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ | Cong govt anti hindu stand

Raita morcha protest
Published on

ಬೆಂಗಳೂರು : ಮೂರು ಹಸುಗಳ ಕೆಚ್ಚಲು ಕೊಯ್ದು ಹಿಂದುಗಳ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ಆಕ್ರೋಶ ವ್ಯಕ್ತಪಡಿಸಿ, ದುಷ್ಕೃತ್ಯವನ್ನು ಖಂಡಿಸಿ ಬುಧವಾರ ಪ್ರತಿಭಟನೆ ನಡೆಸಿತು. ಜತೆಗೆ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಿ ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿತು.

ಬೆಂಗಳೂರು ದಕ್ಷಿಣ, ಉತ್ತರ, ಕೇಂದ್ರ ಜಿಲ್ಲೆಗಳು, ಹಾಸನ, ಧಾರವಾಡ, ಮಂಡ್ಯ, ರಾಯಚೂರು, ಹುಬ್ಬಳ್ಳಿ-ಧಾರವಾಡ ಜಿಲ್ಲಾ ಘಟಕಗಳಿಂದ ಧರಣಿ, ಪ್ರತಿಭಟನಾ ಪ್ರದರ್ಶನ, ಎತ್ತುಗಳೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆದವು.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನಾಕಾರರು ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ವೆಂಕಟೇಶ್ ಭಾವಚಿತ್ರಗಳಿಗೆ ಗೋಮಯ ಬಳಿದು ಸಿಟ್ಟು ಹೊರ ಹಾಕಿದರು. ಅಮಾನುಷ ಕೃತ್ಯದ ಬಗ್ಗೆ ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ಮರೆತು ವರ್ತಿಸುತ್ತಿದೆ. ದುಷ್ಕೃತ್ಯಕ್ಕೆ ಸಹಕರಿಸಿದವರು ಹಾಗೂ ಕುಮ್ಮಕ್ಕು ನೀಡಿದವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ಕೊಳಕು ಮನಸ್ಸು ಶುದ್ಧೀಕರಣವಾಗಲಿ, ಗೋವುಗಳನ್ನು ರಕ್ಷಿಸುವ ಮನಸ್ಸು ಮಾಡಲೆಂಬ ಉದ್ದೇಶ ಸಾರಲು ಗೋಮಯ ಬಳಿಯುತ್ತಿದ್ದೇವೆ ಎಂದು ರೈತ ಮೋರ್ಚಾ ಮುಖಂಡರು ಎಚ್ಚರಿಸಿದರು.

ಹಿಂದು ವಿರೋಧಿ ನಿಲುವು

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಬಹುಸಂಖ್ಯಾತ ಹಿಂದುಗಳ ವಿರೋಧಿ ನೀತಿಗಳನ್ನು ಜಾರಿ ಮಾಡುತ್ತಾ ಬಂದಿದೆ. ಗೋಶಾಲೆಗಳಿಗೆ ನೀಡುತ್ತಿದ್ದ ಅನುದಾನವನ್ನು ರದ್ದುಪಡಿಸಿದೆ ಎಂದು ಆಕ್ಷೇಪಿಸಿದರು.

ದಾನಿಗಳು ಪಶು ಆಸ್ಪತ್ರೆಗೆ ನೀಡಿದ್ದ ಬಹು ಕೋಟಿ ರೂ. ಮೌಲ್ಯದ ಜಾಗ ಕಬಳಿಸುವ ಹುನ್ನಾರ ಹೂಡಲಾಗಿದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಈ ಜಾಗ ಬಿಟ್ಟುಕೊಡುವ ತೀರ್ಮಾನದ ವಿರುದ್ಧ ಹೋರಾಟ ಮಾಡಿದವರನ್ನು ಬೆದರಿಸಲು ಹಸುಗಳ ಕೆಚ್ಚಲು ಕೊಯ್ದು ಹೀನಕೃತ್ಯ ಎಸಗಲಾಗಿದೆ ಎಂದು ಕಿಡಿಕಾರಿದರು.

ಗೋವುಗಳನ್ನು ರಕ್ಷಿಸಿ ಉಳಿಸಿ ಎಂಬ ೋಷಣೆ ಮೊಳಗಿಸುವ ಜತೆಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರ ಮೊಳಗಿಸಿ, ನ್ಯಾಯ ನೀಡಬೇಕು ಎಂದು ಒತ್ತಾಯಿಸಿದರು. ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತೀಶ್ ಕಡತನಮಲೆ, ಮುಖಂಡ ಅಶೋಕ್ ಮುಕ್ಸಂದ್ರ, ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net