

ಚಿಕ್ಕಮಗಳೂರು: ಗೋಕಳ್ಳರು ದೇವಸ್ಥಾನದ ಬಸವನನ್ನೂ ಬಿಟ್ಟಿಲ್ಲ. ಆದರೆ ದೇವರ ಮಹಿಮೆಯೋ ಏನೋ ಎಂಬಂತೆ ಆ ಕಳ್ಳರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ನಡೆದಾಡುವ ಮೈಲಾರಲಿಂಗ ಎಂದೇ ಹೆಸರಾಗಿದ್ದ ದೇವರ ಬಸವ ವಾಪಸ್ ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನಲ್ಲಿರುವ ಮೈಲಾರಲಿಂಗ ದೇವಸ್ಥಾನದ ಬಸವ ಸುತ್ತಮುತ್ತಲ ಪ್ರದೇಶದಲ್ಲಿ ನಡೆದಾಡುವ ಮೈಲಾರಲಿಂಗ ಎಂದೇ ಪ್ರಸಿದ್ಧಿ ಪಡೆದಿದೆ. ಆದರೆ ದೇವಸ್ಥಾನದ ಆವರಣದಲ್ಲಿ ಬಸವ ಕಾಣಿಸದೇ ಇರುವುದರಿಂದ ಭಕ್ತರು ಚಿಂತೆಗೀಡಾಗಿದ್ದರು.
ಮೈಲಾರಲಿಂಗ ದೇವಸ್ಥಾನದ ಈ ಬಸವನನ್ನೂ ಗೋಕಳ್ಳರು ಬಿಟ್ಟಿರಲಿಲ್ಲ. ಆದರೆ ಕದ್ದುಕೊಂಡು ಹೋಗಿದ್ದವರು ತುಮಕೂರು ಜಿಲ್ಲೆಯ ಅಮೃತೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಹೀಗೆ ಸಿಕ್ಕ ಬಸವ ಮೈಲಾರಲಿಂಗ ದೇವಸ್ಥಾನದ್ದು ಎಂದು ತಿಳಿದ ಪೊಲೀಸರು ಮಾಹಿತಿ ನೀಡಿದ್ದಾರೆ. ಇಂದು ಈ ಬಸವ ಮರಳಿ ದೇವಸ್ಥಾನಕ್ಕೆ ಬಂದಿದ್ದು, ನೂರಾರು ಮಂದಿ ಸೇರಿ ಭರ್ಜರಿ ಸ್ವಾಗತ ಕೋರಿದರು.