

ರಿಪ್ಪನ್‌ಪೇಟೆ: ಹಾಲನ್ನು ನಿಸ್ವಾರ್ಥವಾಗಿ ನೀಡುತ್ತಿರುವ ಗೋವುಗಳು ಜನಸಮುದಾಯವನ್ನು ಪೋಷಣೆ ಮಾಡುವ ಮಾತೆ ಎಂದು ಹೊಂಬುಜ ಜೈನಮಠದ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು.
ಹೊಂಬುಜ ಗೋಶಾಲೆಯಲ್ಲಿ ಬುಧವಾರ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಚನ ನೀಡಿದ ಅವರು, ದೀಪಾವಳಿಯ ಪಾಡ್ಯ ಸುದಿನದಂದು ಗೋಪೂಜೆ ಸಂಸ್ಕಾರವು ಭಾರತೀಯ ಧರ್ಮ ಪರಂಪರೆಯ ಮಹತ್ವವನ್ನು ಸಾರುತ್ತದೆ. ಕಾಮಧೇನು ಎಂಬ ಪವಿತ್ರ ಭಾವನೆಯೊಂದಿಗೆ ಕೃಷಿಕರು ಗೋವುಗಳನ್ನು ಆರೈಕೆ ಮಾಡುವಂತಾಗಲು ಗೋಪೂಜೆಯಲ್ಲಿ ನಾವೆಲ್ಲರೂ ಪಾಲ್ಗೊಳ್ಳೋಣ ಎಂದರು.
ಶ್ರೀ ಪಾರ್ಶ್ವನಾಥ ಸ್ವಾಮಿ, ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಲಾಯಿತು. ಶ್ರೀ ನೇಮಿನಾಥಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ, ಶ್ರೀ ಸರಸ್ವತಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಕ್ಷೇತ್ರಪಾಲ, ಶ್ರೀ ನಾಗ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಲಾಯಿತು.