ಮದ್ಯದ ಮೇಲೆ 20% 'ಕೌ ಸೆಸ್'​! ವೈರಲ್​ ಬಾರ್​ ಬಿಲ್​ ಕಂಡ ನೆಟ್ಟಿಗರು ಗೊಂದಲ; ಅಷ್ಟಕ್ಕೂ ಏನಿದು Cow Cess?

ವಿಜಯವಾಣಿ (16)
Published on

Cow Cess: ರಾಜಸ್ಥಾನದ ಜೋಧ್‌ಪುರದ ಬಾರ್‌ನಲ್ಲಿ ಮದ್ಯ ಖರೀದಿಸಿದ ಗ್ರಾಹಕನಿಗೆ ಶೇ.20ರಷ್ಟು ತೆರಿಗೆಯನ್ನು ವಿಧಿಸಲಾಯಿತು. ಈ ಹೆಚ್ಚುವರಿ ತೆರಿಗೆಯನ್ನು 'ಕೌ ಸೆಸ್' ಎಂದು ಬಾರ್​ ಮ್ಯಾನೇಜರ್​ ಹೇಳಿದ್ದಾನೆ. ಇದರಿಂದ ಗೊಂದಲಕ್ಕೊಳಗಾದ ಗ್ರಾಹಕ, ಈ ಬಿಲ್​ ಅನ್ನು ಜಾಲತಾಣಗಳಲ್ಲಿ ಹರಿಬಿಟ್ಟಿದ್ದೇ ತಡ ನೆಟ್ಟಿಗರ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.

ಸೆ.30ರಂದು, ಜೋಧ್‌ಪುರ ಪಾರ್ಕ್ ಪ್ಲಾಜಾದಲ್ಲಿರುವ ಜೆಫ್ರಿ ಬಾರ್‌ನಲ್ಲಿ ಗ್ರಾಹಕರೊಬ್ಬರು ಕಾರ್ನ್ ಫ್ರಿಟರ್‌ಗಳು ಮತ್ತು 6 ಬಿಯರ್‌ಗಳನ್ನು ಆರ್ಡರ್ ಮಾಡಿದ್ದರು. ಖರೀದಿಸಿದ ವಸ್ತುಗಳಿಗೆ ಒಟ್ಟು 2,650 ರೂ. ತಗುಲಿದ್ದು, ಹೆಚ್ಚುವರಿ ಜಿಎಸ್‌ಟಿ, ವ್ಯಾಟ್ ಮೊತ್ತವನ್ನು ಸೇರಿಸಲಾಗಿತ್ತು. ಇದಕ್ಕೆ ಓಕೆ ಎಂದ ವ್ಯಕ್ತಿ, ಅದರ ಕೆಳಗೆ ಹಾಕಲಾಗಿದ್ದ 20% ಕೌ ಸೆಸ್ ಕಂಡು ಗಾಬರಿಗೊಂಡಿದ್ದ. ಕಾರಣ, ಇದೆಲ್ಲವೂ ಸೇರಿ ಒಟ್ಟಾರೆ ಬಿಲ್​ ಮೊತ್ತ 3,262 ರೂ. ಆಗಿತ್ತು. ಮದ್ಯದ ಮೇಲೆ ಹಾಕಲಾದ ಕೌ ಸೆಸ್ ಎಂದರೇನು? ಎಂದು ಮಾಲೀಕನನ್ನು ಪ್ರಶ್ನಿಸಿದ,

ಇದಕ್ಕೆ ಉತ್ತರಿಸಿದ ಹೋಟೆಲ್ ಮ್ಯಾನೇಜರ್ ನಿಖಿಲ್ ಪ್ರೇಮ್, 'ಕೌ ಸೆಸ್' ಹೊಸ ತೆರಿಗೆ ಏನಲ್ಲ. ಇದು 2018ರಿಂದ ಮದ್ಯ ಮಾರಾಟದ ಮೇಲೆ ಹಾಕಲಾಗುತ್ತಿದೆ. ಈ ಸೆಸ್ ಅನ್ನು ಮದ್ಯದ ವಸ್ತುಗಳ ಖರೀದಿಗೆ ವಿಧಿಸುಲಾಗುತ್ತಿದೆ ಎಂದಿದ್ದಾರೆ. ವಾಸ್ತವವಾಗಿ, 2018ರ ಜೂನ್ 22ರಂದು, ಆಗಿನ ವಸುಂಧರಾ ರಾಜೆ ಸರ್ಕಾರವು ರಾಜಸ್ಥಾನ ಮೌಲ್ಯವರ್ಧಿತ ತೆರಿಗೆ ಕಾಯ್ದೆ, 2003ರ ಅಡಿಯಲ್ಲಿ ಡೀಲರ್‌ಗಳು ಮಾರಾಟ ಮಾಡುವ ವಿದೇಶಿ ಮದ್ಯದ ಮೇಲೆ ಮತ್ತು ಭಾರತದಲ್ಲಿ ತಯಾರಿಸಿದ ದೇಶಿಯ ಮದ್ಯದ ಮೇಲೆ ಶೇ.20ರಷ್ಟು ಸರ್‌ಚಾರ್ಜ್ ಅನ್ನು ಸೂಚಿಸಿತು.

ಈ ಸುಂಕದಿಂದ ಬಂದ ಹಣವನ್ನು ಗೋವುಗಳ ರಕ್ಷಣೆಗಾಗಿ ಬಳಸಲಾಗುತ್ತದೆ. ಆದಾಗ್ಯೂ, ರಾಜೆ ಅವರ ಅವಧಿಯಲ್ಲಿ, ಸರ್‌ಚಾರ್ಜ್ ಶೇ.10ರಷ್ಟಿತ್ತು. ಅದೇ 2018ರಲ್ಲಿ, ಆಗಿನ ಮುಖ್ಯಮಂತ್ರಿ ಗೋವು ಸಂರಕ್ಷಣಾ ಕೇಂದ್ರಗಳನ್ನು ಬೆಂಬಲಿಸಲು ಮತ್ತು ರಕ್ಷಣೆಯನ್ನು ಉತ್ತೇಜಿಸಲು ಮದ್ಯದ ಮೇಲಿನ ಸುಂಕವನ್ನು ಶೇ.20ಕ್ಕೆ ವಿಸ್ತರಿಸಿದರು. ನಂತರದಲ್ಲಿ ಬಂದವರು ಈ ಸೆಸ್ ಅನ್ನು ಇಂದಿಗೂ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಏನಿದು ಕೌ ಸೆಸ್​!

ವಾಸ್ತವವಾಗಿ, ಕೌ ಸೆಸ್ ರಾಜಸ್ಥಾನ ಸೇರಿದಂತೆ ಭಾರತದ ಕೆಲವು ರಾಜ್ಯಗಳಲ್ಲಿ ಜಾನುವಾರುಗಳ ವೈದ್ಯಕೀಯ ಆರೈಕೆ, ವಸತಿ ಸೇರಿದಂತೆ ಗೋಸಂರಕ್ಷಣಾ ಉಪಕ್ರಮಗಳನ್ನು ಬೆಂಬಲಿಸಲು ಮತ್ತು ಗೋಶಾಲೆಗಳನ್ನು ಪೋಷಿಸುವುದಕ್ಕೆ ಸಂಬಂಧಿಸಿದ ತೆರಿಗೆಯಾಗಿದೆ. ಈ ಉದ್ದೇಶದಲ್ಲಿ ಇದನ್ನು ಜಾರಿಗೆ ತರಲಾಗಿದೆ.

ಯಾವ ರಾಜ್ಯಗಳಲ್ಲಿ ವಿಧಿಸಲಾಗಿದೆ?

ರಾಜಸ್ಥಾನ, ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿ ಕೆಲವು ರಾಜ್ಯಗಳಲ್ಲಿ ಕೌ ಸೆಸ್​ ಅನ್ನು ವಿಧಿಸಲಾಗಿದೆ. ಆಯಾ ಸರ್ಕಾರದಲ್ಲಿ ಎಷ್ಟು ಸೆಸ್​ ಹಾಕಬೇಕು ಎಂಬುದರಲ್ಲಿ ಬದಲಾವಣೆಗಳಿವೆ.

ಹೇಗೆ ಅನ್ವಯ?

ದರಗಳು ರಾಜ್ಯ ಮತ್ತು ವಸ್ತುವಿಗೆ ಅನುಗುಣವಾಗಿ ಬದಲಾಗುತ್ತವೆ. ಉದಾಹರಣೆಗೆ ಹರಿಯಾಣದಲ್ಲಿ, ಜಾನುವಾರಗಳ ಕಲ್ಯಾಣಕ್ಕೆ ಹಣಕಾಸು ಒದಗಿಸಲು ರಾಜ್ಯದ ಅಬಕಾರಿ ನೀತಿಯಡಿಯಲ್ಲಿ ಒಂದು ಮದ್ಯದ ಬಾಟಲಿ ಮೇಲೆ 5 ರೂ. ವಿಧಿಸಲಾಗುತ್ತದೆ. ಕೆಲವು ರಾಜ್ಯಗಳು ಬೈಕ್‌, ಕಾರು ಅಥವಾ ಐಷಾರಾಮಿ ವಸ್ತುಗಳ ಖರೀದಿ ಮೇಲೆ 1,000 ರೂ. ಹಣವನ್ನು ಸೆಸ್​ ರೂಪದಲ್ಲಿ ಪಡೆಯುತ್ತವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net