

ನವದೆಹಲಿ: ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ಸಂಚರಿಸುತ್ತಿರುವ ವಿಶೇಷ ರೈಲುಗಳ ಪ್ರಯಾಣಿಕರಿಗೆ ಮಾತ್ರವಲ್ಲ, ಇತರ ಉದ್ದೇಶಕ್ಕೂ ಬಳಕೆಯಾಗುತ್ತಿದೆ.
ದೆಹಲಿಯ ಅಬಕಾರಿ ಸುಂಕದ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ಈ ಸತ್ಯ ಬಯಲಾಗಿದೆ. ಭಾರಿ ಪ್ರಮಾಣದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ವಿದೇಶಿ ಬ್ರಾಂಡ್ಗಳ ಸಿಗರೇಟ್ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ದೇಶದ ವಿವಿಧ ಕಡೆಗಳಿಗೆ ಸಾಗಿಸಲಾಗುತ್ತಿದ್ದ 23.5 ಲಕ್ಷ ಸಿಗರೇಟ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಮಾರುಕಟ್ಟೆ ಮೌಲ್ಯ 1.60 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ.
ದೇಶದಲ್ಲಿ ಬಳಕೆಯಾಗುವ ಶೇ.25 ಸಿಗರೇಟ್ಗಳು ಅಕ್ರಮ ವಿದೇಶಿ ಸಿಗರೇಟ್ಗಳಾಗಿವೆ ಎಂದು ಭಾರತೀಯ ತಂಬಾಕು ಮಂಡಳಿ ವರದಿ ಹೇಳುತ್ತದೆ. ಇದರಿಂದಾಗಿ ಸರ್ಕಾರಕ್ಕೆ ಪ್ರತಿ ವರ್ಷ 13,000 ಕೋಟಿ ರೂ. ತೆರಿಗೆ ವಂಚನೆಯಾಗುತ್ತಿದೆ.
ಜುಲೈ 8ರಂದು ನಡೆದ ದಾಳಿಯಲ್ಲಿ ಪ್ಯಾರಿಸ್ನ 4.5 ಲಕ್ಷ ಸಿಗರೇಟ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದರ ಮೌಲ್ಯ 40 ಲಕ್ಷ ಎಂದು ಅಂದಾಜಿಸಲಾಗಿತ್ತು. ಬಾಂಗ್ಲಾದೇಶ, ಮಯನ್ಮಾರ್ನಿಂದ ಈ ಕಳ್ಳಸಾಗಣೆ ನಡೆಯುತ್ತಿದೆ. ವಾರಾಣಸಿಯ ಕೋವಿಡ್ ವಿಶೇಷ ರೈಲಿನ ಮೂಲಕ ದೆಹಲಿಗೆ ತರಲಾಗಿತ್ತು. ಇನ್ನೊಂದು ವಿಶೇಷವೆಂದರೆ, ಭಾರತಕ್ಕೆ ಬರುವ ಕಳ್ಳನೋಟುಗಳಿಗೂ ಈ ದೇಶಗಳ ಗಡಿ ರಾಜಮಾರ್ಗವಾಗಿದೆ.
ಇದಾದ ಎರಡು ದಿನಗಳ ಬಳಿಕ ಕೊರಿಯಾದ ಗೋಲ್ಡ್ ಎಸ್ಸೆ ಬ್ರ್ಯಾಂಡ್ನ 10 ಲಕ್ಷ ಸಿಗರೇಟ್ಗಳನ್ನು ಜಪ್ತಿ ಮಾಡಲಾಗಿತ್ತು. ಇದರ ಮೌಲ್ಯ 1.2 ಕೋಟಿ ರೂ. ಇದನ್ನು ಕೂಡ ಕೋವಿಡ್ ವಿಶೇಷ ರೈಲಿನಲ್ಲಿ ತರಲಾಗಿತ್ತು. ಇದಲ್ಲದೇ, ಗೋಣಿಚೀಲಗಳಲ್ಲಿ 9 ಲಕ್ಷ ಸಿಗರೇಟ್ಗಳಿದ್ದುದನ್ನು ವಶಪಡಿಸಿಕೊಳ್ಳಲಾಗಿತ್ತು.