

ಬೆಂಗಳೂರು: ಕರೊನಾ COVID19 ಸೋಂಕು ತ್ವರಿತವಾಗಿ ಹರಡುತ್ತಿದ್ದು, ಮೂವತ್ತಕ್ಕೂ ಹೆಚ್ಚು ಪ್ರಕರಣಗಳಿರುವ ಏಳು ನಗರಗಳ ಪಟ್ಟಿಯಲ್ಲಿ ಬೆಂಗಳೂರು ಕೂಡ ಇದೆ. ಇದೇ ರೀತಿ ದೇಶದ 25 ಕರೊನಾ ಹಾಟ್ಸ್ಪಾಟ್ ಸಿಟಿಗಳ ಪೈಕಿ ಬೆಂಗಳೂರು ನಗರ ಮತ್ತು ಮೈಸೂರು ನಗರಗಳಿವೆ. ಕಳೆದ 14 ದಿನಗಳ ಅವಧಿಯಲ್ಲಿ ಎಮರ್ಜಿಂಗ್ ಹಾಟ್ಸ್ಪಾಟ್ ಆಗಿ ಚಿಕ್ಕಬಳ್ಳಾಪುರ ಗುರುತಿಸಿಕೊಂಡಿದೆ. ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಸಂಜೆ 7 ಗಂಟೆವರೆಗಿನ ಡೇಟಾ ಇಟ್ಟುಕೊಂಡು ಪ್ರಕಟಿಸಿರುವ ವಿಶ್ಲೇಷಣಾತ್ಮಕ ವರದಿಯಲ್ಲಿ ಈ ಅಂಶಗಳು ಬಯಲಾಗಿವೆ.
ಕೇಂದ್ರ ಸರ್ಕಾರದ ಡೇಟಾ ಪ್ರಕಾರ, ಮಾರ್ಚ್ 31ರ ಸಂಜೆ 7 ಗಂಟೆಯ ಮಾಹಿತಿಗೆ ಅನುಗುಣವಾಗಿ ಹೇಳುವುದಾದರೆ, ಒಟ್ಟು ಖಚಿತವಾಗಿರುವ COVID19 ಕೇಸ್ಗಳ ಸಂಖ್ಯೆ 1,397. ಇದು ಸೋಮವಾರ (ಮಾ.30) ರಾತ್ರಿ 9.30ರ ಡೇಟಾ(1251)ಕ್ಕೆ ಹೋಲಿಸಿದರೆ 146 ಸಂಖ್ಯೆ ಹೆಚ್ಚಾಗಿದೆ. ಇದೇ ರೀತಿ ಈ ಪೈಕಿ ಆ್ಯಕ್ಟಿವ್ ಕೇಸ್ಗಳು 1238. ಇದು ಸೋಮವಾರದ ಡೇಟಾ(1117)ಕ್ಕೆ ಹೋಲಿಸಿದರೆ 121 ಹೆಚ್ಚು.
ಸೋಂಕು ಹರಡುವ ಪ್ರಮಾಣ ಅರ್ಥಾತ್ COVID19 ಹರಡುತ್ತಿರುವ ಬೆಳವಣಿಗೆ ದರ ದೇಶದಲ್ಲಿ ಸೋಮವಾರ(4.8 ದಿನ)ಕ್ಕೆ ಹೋಲಿಸಿದರೆ 4.9 ದಿನ ಆಗಿದೆ. ಬೆಳವಣಿಗೆ ದರವನ್ನು ಇಲ್ಲಿ ಒಟ್ಟು ಕೇಸ್ಗಳು ದ್ವಿಗುಣವಾಗುವ ಅವಧಿಯನ್ನು ಕಳೆದ 2.5 ದಿನಗಳ ಲೆಕ್ಕಾಚಾರದಲ್ಲಿ ನೋಡಲಾಗುತ್ತದೆ. ಇನ್ನು ಸೋಂಕು ಮುಕ್ತರಾದವರ ಸಂಖ್ಯೆ 124 ಆಗಿದೆ. ಸೋಮವಾರ 13 ಜನರ ಆರೋಗ್ಯ ಸುಧಾರಿಸಿದ್ದರೆ, ನಿನ್ನೆ 23 ಜನರ ಆರೋಗ್ಯ ಸುಧಾರಿಸಿದೆ. ಇನ್ನು ಮರಣ ಪ್ರಮಾಣದ ಲೆಕ್ಕ ನೋಡಿದರೆ ಸೋಮವಾರ ಒಟ್ಟು ಮರಣ ಪ್ರಮಾಣ 32 ಇದ್ದಿದ್ದು, ಮಂಗಳವಾರ ಸಂಜೆ ವೇಳೆಗೆ 35 ಆಗಿತ್ತು. ಮರಣ ಪ್ರಮಾಣ ಜಾಗತಿಕ ಸರಾಸರಿ 4.8% ಇದ್ದರೆ, ಭಾರತದ್ದು 2.5% ಇದೆ. ಸೋಮವಾರ ಇದು 2.6% ಇತ್ತು.
ರಾಜ್ಯಗಳ ಮೌಲ್ಯಮಾಪನ ಮಾಡುವುದಾದರೆ, ದೇಶದಲ್ಲಿ ಖಚಿತವಾಗಿರುವ 1,397 ಕೇಸ್ಗಳ ಪೈಕಿ ಶೇಕಡ 80 ಪ್ರಕರಣಗಳಿರುವುದು ಈ ಹತ್ತು ರಾಜ್ಯಗಳಲ್ಲಿ - ಮಹಾರಾಷ್ಟ್ರ, ಕೇರಳ, ಉತ್ತರಪ್ರದೇಶ, ದೆಹಲಿ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ತೆಲಂಗಾಣ, ಗುಜರಾತ್, ತಮಿಳುನಾಡು, ಪಂಜಾಬ್. ಇನ್ನು ಈ ಪೈಕಿ ಕೇಸ್ಗಳು ದೇಶದ ಸರಾಸರಿಗಿಂತ ದುಪ್ಪಟ್ಟು ವೇಗದಲ್ಲಿ ಹೆಚ್ಚಾಗುತ್ತಿರುವ ಏಳು ರಾಜ್ಯಗಳಿವು- ದೆಹಲಿ, ಜಮ್ಮು ಮತ್ತು ಕಾಶ್ಮೀರ, ಆಂಧ್ರಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ತಮಿಳುನಾಡು.
ಮೂವತ್ತಕ್ಕೂ ಹೆಚ್ಚು COVID19 ಪ್ರಕರಣಗಳೊಂದಿಗೆ ಸೋಂಕು ಹರಡುತ್ತಿರುವ ಹಾಟ್ ಸ್ಪಾಟ್ ಸಿಟಿಗಳು ಏಳು ಇದ್ದು, ಅವುಗಳಲ್ಲಿ ಬೆಂಗಳೂರು ಕೂಡ ಸೇರಿಕೊಂಡಿದೆ. ಮುಂಬೈ, ಕಾಸರಗೋಡು, ಹೈದಾರಾಬಾದ್, ಕಣ್ಣೂರು, ಪುಣೆ, ಜಿಬಿ ನಗರ ಉಳಿದವು. ಅದೇ ರೀತಿ ಕಳೆದ 14 ದಿನಗಳ ಅವಧಿಯಲ್ಲಿ ವಿವಿಧೆಡೆ ಸೋಂಕು ಹರಡುತ್ತಿರುವ ಲಕ್ಷಣಗಳನ್ನು ಗಮನಿಸಿ 24 ಎಮರ್ಜಿಂಗ್ ಹಾಟ್ಸ್ಪಾಟ್ ಸಿಟಿಗಳನ್ನು ಗುರುತಿಸಲಾಗಿದ್ದು, ಇದರಲ್ಲಿ ನಮ್ಮ ರಾಜ್ಯದ ಚಿಕ್ಕಬಳ್ಳಾಪುರವೂ ಸೇರಿದೆ. 24 ನಗರಗಳ ಪಟ್ಟಿಯಲ್ಲಿ ಚಿಕ್ಕಬಳ್ಳಾಪುರ 22 ನೇ ಸ್ಥಾನದಲ್ಲಿದೆ.