ಕರ್ನಾಟಕಕ್ಕೂ ಮತ್ತೆ ಕೋವಿಡ್ ಭಯ; ಆತಂಕ ಪಡುವ ಅಗತ್ಯವಿಲ್ಲ; ಎಚ್ಚರಿಕೆ ವಹಿಸಿ ಎಂದ ಆರೋಗ್ಯ ಸಚಿವರು | covid-19

dinesh gundurao
Published on

ಬೆಂಗಳೂರು: ಕರ್ನಾಟಕದಲ್ಲಿ ಇತ್ತೀಚೆಗೆ ಕೋವಿಡ್-19 ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದೆ. ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ರಾಜ್ಯ ಮತ್ತು ಬೆಂಗಳೂರಿನಲ್ಲಿ ಪ್ರಕರಣಗಳಲ್ಲಿ ಸ್ವಲ್ಪ ಏರಿಕೆ ಕಂಡುಬಂದಿದೆ, ಆದರೆ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಬಾಣಂತಿಯರು, ಗರ್ಭಿಣಿಯರು ಜನ ಹೆಚ್ಚು ಇರುವ ಕಡೆ ಮಾಸ್ಕ್ ಧರಿಸಬೇಕು. ಅನಾವಶ್ಯಕ‌ ಗೊಂದಲ ಸದ್ಯಕ್ಕೆ ಬೇಡ. ಮಾಸ್ಕ್ ಎಲ್ಲರಿಗೂ ಕಡ್ಡಾಯವಲ್ಲ. ಮಾಸ್ಕ್ ಧರಿಸಿದರೆ ನಮಗೆ ಒಳ್ಳೆಯದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಕೊವಿಡ್ ಬಂದವರಿಗೆ ಮೈಲ್ಡ್ ಸಿಂಮ್ಟಮ್ಸ್‌ ಇದೆ. ಗಂಭೀರವಾದ ಸಮಸ್ಯೆಗಳು ಏನೂ ಇಲ್ಲ. ಉಸಿರಾಟದ ಸಮಸ್ಯೆ ಇರುವವರು ಕೊವಿಡ್ ಟೆಸ್ಟ್ ಮಾಡಿಸಬೇಕು. ಪ್ರೋಟೋಕಾಲ್ ಪ್ರಕಾರ ನಡೆದುಕೊಳ್ಳಬೇಕು. ನಾವು ಕೇಂದ್ರ ಸರ್ಕಾರದ ಜೊತೆ ಮಾತನಾಡಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ ಎಂದಿದ್ದಾರೆ.

ಇದು ತುಂಬಾ ಸಾಮಾನ್ಯ ಪರಿಸ್ಥಿತಿ. COVID-19 ಪ್ರಕರಣಗಳ ಸಂಖ್ಯೆಯಲ್ಲಿ ಸ್ವಲ್ಪ ಹೆಚ್ಚಳ ಕಂಡುಬಂದಿದೆ. ಈ ವರ್ಷ ಇಲ್ಲಿಯವರೆಗೆ ನಾವು 35 ಪ್ರಕರಣಗಳನ್ನು ವರದಿ ಮಾಡಿದ್ದೇವೆ. ದೇಶದಲ್ಲಿ ಒಟ್ಟು 257 ಪ್ರಕರಣ ದಾಖಲಾಗಿವೆ. ಕಳೆದ 15 ದಿನಗಳಲ್ಲಿ ಸ್ವಲ್ಪ ಏರಿಕೆಯಾಗಿದೆ ಎಂದಿದ್ದಾರೆ.

ಕೊವಿಡ್ ಕೇಸ್ ಹೆಚ್ಚಾದ ಹಿನ್ನೆಲೆ ನಿನ್ನೆಯೇ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆದಿದ್ದು, ಸಭೆಯಲ್ಲಿ ಒಂದಷ್ಟು ವಿಚಾರಗಳ ಬಗ್ಗೆ ಚರ್ಚಿಸಲಾಗಿದೆ. ಇಂದು ಸಂಜೆ ಅಥವಾ ರಾತ್ರಿ ಒಳಗೆ RTPCR ಟೆಸ್ಟಿಂಗ್ ಜಾಗದ ಬಗ್ಗೆ ಅಧಿಕೃತ ಮಾಹಿತಿ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ.

ಒಂದು ತಿಂಗಳಿಗಾಗುವಷ್ಟು ಟೆಸ್ಟಿಂಗ್ ಕಿಟ್​ಗಳನ್ನ ತೆಗೆದಿಟ್ಟುಕೊಳ್ಳಲು ಸೂಚಿಸಲಾಗಿದೆ. ಅಗತ್ಯವಿದ್ದಾಗ ಮಾತ್ರ ಟೆಸ್ಟ್ ಮಾಡಲಾಗುವುದು. ಬೆಂಗಳೂರಿನಲ್ಲಿ 32 ಕೋವಿಡ್ ಪಾಸಿಟಿವ್ ಪ್ರಕರಣಗಳಿದ್ದು, ಕಳೆದ ಒಂದು ವಾರದಲ್ಲಿ ಕೊಂಚ ಏರಿಕೆ ಕಂಡಿದೆ. ಎಲ್ಲವನ್ನ‌ ಮಾನಿಟರ್ ಮಾಡಲಾಗುತ್ತಿದೆ. ಸದ್ಯಕ್ಕೆ ಕೋವಿಡ್ ವಿಚಾರದಲ್ಲಿ ಆತಂಕಪಡುವ ಸ್ಥಿತಿ ಇಲ್ಲ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net