

ನವದೆಹಲಿ: ಸಾವಿರಾರು ಭಾರತೀಯರ ಕೋವಿಡ್ಗೆ ಸಂಬಂಧಿಸಿದ ದತ್ತಾಂಶಗಳು ಸರ್ಕಾರದ ಸರ್ವರ್ನಿಂದಲೇ ಆನ್ಲೈನ್ನಲ್ಲಿ ಸೋರಿಕೆಯಾಗಿರುವುದು ಕಳವಳಕ್ಕೆ ಕಾರಣವಾಗಿದೆ. ಸೈಬರ್ ಸೆಕ್ಯುರಿಟಿ ಸಂಶೋಧಕ ರಾಜಶೇಖರ್ ರಾಜಹರಿಯಾ ಟ್ವೀಟ್ ಮೂಲಕ ಈ ಆತಂಕಕಾರಿ ಅಂಶವನ್ನು ಬಯಲು ಮಾಡಿದ್ದಾರೆ. ಈ ದತ್ತಾಂಶಗಳು ‘ರೇಯ್್ಡ ಫೋರಮ್್ಸ’ನಲ್ಲಿ ಪ್ರತ್ಯಕ್ಷವಾಗಿದ್ದು ಜನರ ಹೆಸರು, ವಯಸ್ಸು, ಲಿಂಗ, ಮೊಬೈಲ್ ಸಂಖ್ಯೆ, ವಿಳಾಸ ಹಾಗೂ ಅವರ ಕೋವಿಡ್ ಪರೀಕ್ಷಾ ಫಲಿತಾಂಶ ಹಾಗೂ ದಿನಾಂಕ ಮುಂತಾದ ವಿವರಗಳು ಅದರಲ್ಲಿವೆ. ಆನ್ಲೈನ್ ಸರ್ಚ್ ಮೂಲಕ ಈ ವಿವರಗಳನ್ನು ಪಡೆಯಬಹುದಾಗಿದೆ. ಸೋರಿಕೆಯಾಗಿರುವ ಸಾರ್ವಜನಿಕರ ಡೇಟಾ ರೇಯ್್ಡ ಫೋರಮ್್ಸ ವೆಬ್ಸೈಟ್ನಲ್ಲಿ ಮಾರಾಟಕ್ಕೂ ಲಭ್ಯವಿದೆ. 20,000ಕ್ಕೂ ಅಧಿಕ ಜನರ ಮಾಹಿತಿ ಲಭ್ಯವಿದೆ ಎಂದು ಸೈಬರ್ ಕ್ರಿಮಿನಲ್ಗಳು ಹೇಳಿಕೊಂಡಿದ್ದಾರೆ. ಹೆಸರು ಮತ್ತು ಕೋವಿಡ್-19 ಟೆಸ್ಟ್ ಫಲಿತಾಂಶದಂಥ ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯನ್ನು (ಪಿಐಐ) ಕಂಟೆಂಟ್ ಡೆಲಿವರಿ ನೆಟ್ವರ್ಕ್ (ಸಿಡಿಎನ್) ಮೂಲಕ ಬಹಿರಂಗಗೊಳಿಸಲಾಗಿದೆ ಎಂದು ರಾಜಹರಿಯಾ ತಿಳಿಸಿದ್ದಾರೆ.
ಭಾರತದಲ್ಲಿ 3.47 ಲಕ್ಷ ಹೊಸ ಕೇಸ್: ಭಾರತದಲ್ಲಿ ಶುಕ್ರವಾರ ಬೆಳಗ್ಗೆ ವರೆಗಿನ 24 ಗಂಟೆ ಅವಧಿಯಲ್ಲಿ ದೇಶದಾದ್ಯಂತ 3,47,254 ಹೊಸ ಪ್ರಕರಣಗಳು ದೃಢಪಟ್ಟಿವೆ. ಈ ಅವಧಿಯಲ್ಲಿ ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗಿದ್ದು 703 ಜನರು ಮೃತಪಟ್ಟಿದ್ದಾರೆ. ಗುರುವಾರಕ್ಕಿಂತ 200ಕ್ಕೂ ಹೆಚ್ಚು ಜನರ ಸಾವು ಸಂಭವಿಸಿದೆ. ಒಮಿಕ್ರಾನ್ ಕೇಸ್ ಸಂಖ್ಯೆ 9,692ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 20,18,825ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಸೋಂಕಿನ ನಿತ್ಯದ ಪಾಸಿಟಿವಿಟಿ ದರ ಶೇ. 17.94 ಆಗಿದೆ. ಕಳೆದೊಂದು ದಿನದಲ್ಲಿ 2,51,777 ರೋಗಿಗಳು ಗುಣಮುಖರಾಗಿದ್ದು ಚೇತರಿಕೆ ದರ ಶೇ. 93.69 ಆಗಿದೆ. ಬಲಿಯಾದವರ ಒಟ್ಟು ಸಂಖ್ಯೆ 4,88,396ಕ್ಕೆ ತಲುಪಿದೆ. ದೇಶದಲ್ಲಿ ಕರೊನಾ ಪತ್ತೆಗಾಗಿ ಇದುವರೆಗೆ 71,15,38,938 ಸ್ಯಾಂಪಲ್ಗಳ ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.
ದೆಹಲಿಯಲ್ಲಿ ವಾರಾಂತ್ಯ ಕರ್ಫ್ಯೂ ಸಡಿಲಿಕೆ ನಕಾರ: ರಾಷ್ಟ್ರ ರಾಜಧಾನಿಯಲ್ಲಿ ವಾರಾಂತ್ಯ ಕರ್ಫ್ಯೂ ಸಡಿಲಿಸುವ ಆಪ್ ಸರ್ಕಾರದ ಪ್ರಸ್ತಾಪನೆಯನ್ನು ಉಪ ರಾಜ್ಯಪಾಲ ಅನಿಲ್ ಬೈಜಾಲ್ ಪುರಸ್ಕರಿಸಿಲ್ಲ. ಹೀಗಾಗಿ ವೀಕೆಂಡ್ ಕರ್ಫ್ಯೂ ಮುಂದುವರಿಯಲಿದೆ. ಸಾಂಕ್ರಾಮಿಕತೆಯ ಪರಿಸ್ಥಿತಿ ಸುಧಾರಿಸಿದ ಮೇಲೆ ವೀಕೆಂಡ್ ಕರ್ಫ್ಯೂ ವಾಪಸ್ ಪಡೆಯುವ ಬಗ್ಗೆ ತೀರ್ವನಿಸಲಾಗುತ್ತದೆಂದು ಉಪ ರಾಜ್ಯಪಾಲರ ಕಚೇರಿ ಶುಕ್ರವಾರ ತಿಳಿಸಿದೆ. ಮಾರುಕಟ್ಟೆಗಳಲ್ಲಿ ಸಮ-ಬೆಸ ಸಂಖ್ಯೆ ಆಧಾರದ ಮೇಲೆ ಅಂಗಡಿಗಳನ್ನು ತೆರೆಯುವ ಸಕಾರದ ನಿರ್ಧಾರವನ್ನೂ ಬೈಜಾಲ್ ತಡೆ ಹಿಡಿದಿದ್ದಾರೆ. ಆದರೆ, ಖಾಸಗಿ ಕಚೇರಿಗಳಲ್ಲಿ ಶೇ. 50 ಹಾಜರಾತಿ ಶಿಫಾರಸಿಗೆ ಸಮ್ಮತಿಸಿದ್ದಾರೆ.
ಶೇ. 65 ಜನರಲ್ಲಿ ಅನ್ಯ ವ್ಯಾಧಿ: ಮುಂಬೈಯ ಹಲವು ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳಲ್ಲಿರುವ (ಐಸಿಯು) ಕೋವಿಡ್ ರೋಗಿಗಳ ಪೈಕಿ ಶೇಕಡ 65ರಷ್ಟು ಜನರು ಇತರ ಪ್ರಾಥಮಿಕ ರೋಗಗಳ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದವರಾಗಿದ್ದು ತಪಾಸಣೆ ವೇಳೆ ಆಕಸ್ಮಿಕವಾಗಿ ಕೋವಿಡ್ ಪಾಸಿಟಿವ್ ಆದವರು ಎಂಬ ಅಂಶ ಬೆಳಕಿಗೆ ಬಂದಿದೆ. ಇವರಿಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಪ್ರಸಕ್ತ ಅಲೆಯಲ್ಲಿ ಐಸಿಯು ಬೆಡ್ಗಳ ಬೇಡಿಕೆ ತುಲನಾತ್ಮಕವಾಗಿ ಕಡಿಮೆಯಾಗಿದೆ ಎಂದಿದ್ದಾರೆ. ಕರೊನಾ ರೋಗಿಗಳಿಗಾಗಿ ಮೀಸಲಿಟ್ಟಿರುವ ಮುಂಬೈ ಆಸ್ಪತ್ರೆಗಳ 3,000 ಬೆಡ್ಗಳಲ್ಲಿ 1,000 ಬೆಡ್ಗಳಲ್ಲಿ ಕೋವಿಡ್ ರೋಗಿಗಳಿದ್ದಾರೆ.
ಪ್ರಯಾಣಿಕ ಮಾಸ್ಕ್ ಧರಿಸದ್ದಕ್ಕೆ ವಿಮಾನವೇ ವಾಪಸ್!: ಒಬ್ಬ ಪ್ರಯಾಣಿಕ ಮಾಸ್ಕ್ ಧರಿಸಲು ನಿರಾಕರಿಸಿದ ಕಾರಣಕ್ಕೆ ಅರ್ಧ ದಾರಿಯಲ್ಲಿ ವಿಮಾನವನ್ನೇ ನಿಲ್ದಾಣಕ್ಕೆ ಮರಳಿಸಿ ಆತನನ್ನು ಪೊಲೀಸರಿಗೆ ಒಪ್ಪಿಸಿದ ಪ್ರಕರಣವೊಂದು ಅಮೆರಿಕದಲ್ಲಿ ನಡೆದಿದೆ. ಗುರುವಾರ ಮಿಯಾಮಿಯಿಂದ ಲಂಡನ್ಗೆ ಪ್ರಯಾಣಿಸುತ್ತಿದ್ದ ಅಮೆರಿಕನ್ ಏರ್ಲೈನ್ಸ್ನ ವಿಮಾನವೊಂದರಲ್ಲಿ ಇದ್ದ ಒಬ್ಬ ಪ್ರಯಾಣಿಕ ಸಿಬ್ಬಂದಿಯ ಮನವಿಯನ್ನೂ ಲೆಕ್ಕಿಸದೆ ಮಾಸ್ಕ್ ಧರಿಸಲು ನಿರಾಕರಿಸಿದ. ವೈಮಾನಿಕ ಸಿಬ್ಬಂದಿ ಹಾಗೂ ಸಹಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಪೈಲಟ್ ವಿಮಾನವನ್ನು ಮಿಯಾಮಿ ನಿಲ್ದಾಣಕ್ಕೆ ಮರಳಿಸಿದ. ಅಷ್ಟು ಹೊತ್ತಿಗೆ ಮಾಹಿತಿ ಪಡೆದಿದ್ದ ಪೊಲೀಸರು, ವಿಮಾನ ಮರಳುತ್ತಲೇ ಆ ಪ್ರಯಾಣಿಕನನ್ನು ವಶಕ್ಕೆ ಪಡೆದರು. ವಿಮಾನದಲ್ಲಿ 129 ಪ್ರಯಾಣಿಕರು ಹಾಗೂ 14 ಸಿಬ್ಬಂದಿ ಇದ್ದರು.
ಕೋವಿನ್ ಆ್ಯಪ್ ಸುರಕ್ಷಿತ: ಕೋವಿಡ್ ಸೋಂಕಿತರ ವೈಯಕ್ತಿಕ ಡೇಟಾ ಸೋರಿಕೆ ಆಗಿದೆ ಎಂದು ಮಾಧ್ಯಮಗಳಲ್ಲಿ ಆಗಿರುವ ವರದಿಯನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ. ಕೋವಿನ್ ಆಪ್ನಿಂದ ಯಾವುದೇ ಸೋರಿಕೆ ಆಗಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸ್ಪಷ್ಟಪಡಿಸಿದೆ. ಇದು ಅತ್ಯಂತ ಸುರಕ್ಷಿತವಾಗಿದೆ. ಆದರೂ ಡೇಟಾ ಸೋರಿಕೆಯ ಆರೋಪದ ಬಗ್ಗೆ ಪರಿಶೀಲನೆ ನಡೆಸಲಾಗುವುದು.
ಒಂದು ಫೋನ್, 6 ನೋಂದಣಿ: ಒಂದೇ ಮೊಬೈಲ್ ಸಂಖ್ಯೆ ಬಳಸಿ ಕೋವಿನ್ ಆಪ್ನಲ್ಲಿ ಆರು ಜನರು ಕರೊನಾ ಲಸಿಕೆಗಾಗಿ ಹೆಸರು ನೋಂದಾಯಿಸಿ ಕೊಳ್ಳಲು ಅವಕಾಶ ಕಲ್ಪಿಸಿರುವು ದಾಗಿ ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ. ಲಸಿಕೆ ಪಡೆದ ಪರಿಸ್ಥಿತಿ ಕುರಿತ ಮಾಹಿತಿಯನ್ನು ಸರಿಪಡಿಸಲು ‘ರೇಯ್್ಸ ಆನ್ ಇಶ್ಶೂ’ ಎಂಬ ಹೊಸ ಯುಟಿಲಿಟಿ ಫೀಚರ್ ಅಳವಡಿಸಲಾಗಿದೆ ಎಂದೂ ಆರೋಗ್ಯ ಸಚಿವಾಲಯ ಹೇಳಿದೆ.