ಕೋವಿಡ್ ಅವಧಿ ಅಧಿಕ ಸಾವು

4-681e44e141234
Published on

ನವದೆಹಲಿ: ಬುಧವಾರ ಬಿಡುಗಡೆಯಾಗಿರುವ ನಾಗರಿಕ ನೋಂದಣಿ ವ್ಯವಸ್ಥೆಯ ನೂತನ ಜನಸಂಖ್ಯಾ ದತ್ತಾಂಶದ ಪ್ರಕಾರ, ಭಾರತದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ 2020ರ ವರ್ಷಕ್ಕಿಂತ 2021ರಲ್ಲಿ 21 ಲಕ್ಷದಷ್ಟು ಸಾವಿನ ಸಂಖ್ಯೆ ಅಧಿಕವಾಗಿ ದಾಖಲಾಗಿದೆ ಎಂಬುದು ಬೆಳಕಿಗೆ ಬಂದಿದೆ.

ಭಾರತದಲ್ಲಿ ಕೋವಿಡ್​ನಿಂದ ಸಾವನ್ನಪ್ಪಿದವರ ನಿಜವಾದ ಸಂಖ್ಯೆ ಎಷ್ಟು ಎಂಬ ಬಗ್ಗೆ ಈಗಲೂ ಚರ್ಚೆ ನಡೆಯುತ್ತಿದೆ. ಅಲ್ಲದೆ, ಈ ವರ್ಷ ಆರೋಗ್ಯ ಸಚಿವಾಲಯ ಕೋವಿಡ್​ನಿಂದಾಗಿ ಭಾರತದಲ್ಲಿ 5.33 ಲಕ್ಷ ಜನರು ಸಾವಿಗೀಡಾಗಿದ್ದಾರೆ ಎಂಬ ವರದಿಯನ್ನು ನೀಡಿದೆ. ಈ ವಿಚಾರ ಸಂಬಂಧ ಹಲವಾರು ಅಧ್ಯಯನಗಳ ಪ್ರಕಾರ ನಿಜವಾದ ಸಾವಿನ ಸಂಖ್ಯೆ ಆರೋಗ್ಯ ಇಲಾಖೆ ನೀಡಿದ್ದ ಸಂಖ್ಯೆಗಿಂತ ನಾಲ್ಕರಿಂದ ಹನ್ನೆರಡು ಪಟ್ಟು ಹೆಚ್ಚು ಎಂದು ಅಂದಾಜಿಸಲಾಗಿದೆ.

2022 ರಲ್ಲಿ ಬಿಡುಗಡೆಯಾದ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ವರದಿಯ ಪ್ರಕಾರ, 2020 ಮತ್ತು 2021 ರಲ್ಲಿ ಭಾರತದಲ್ಲಿ ಸುಮಾರು 47 ಲಕ್ಷ ಜನರು ಕೋವಿಡ್​ಗೆ ತುತ್ತಾಗಿದ್ದಾರೆ ಎಂಬುದಾಗಿದೆ. ಸದ್ಯ ಭಾರತದಲ್ಲಿ ಜನನ ಮರಣಗಳ ದಾಖಲೆಯುಳ್ಳ ನಾಗರಿಕ ನೋಂದಣಿ ವ್ಯವಸ್ಥೆಯು ಇದೀಗ ಹೊಸ ದತ್ತಾಂಶವೊಂದನ್ನ ಬಿಡುಗಡೆ ಮಾಡಿದ್ದು, 2020ಕ್ಕೆ ಹೋಲಿಸಿದರೆ 2021ರಲ್ಲಿ 21 ಲಕ್ಷಕ್ಕೂ ಹೆಚ್ಚು ಸಾವುಗಳು ದಾಖಲಾಗಿವೆ. ಕೋವಿಡ್ ಸಾಂಕ್ರಾಮಿಕ ರೋಗಕ್ಕೂ ಮೊದಲು, ಅಂದರೆ 2020 ರಲ್ಲಿ 81.15 ಲಕ್ಷ ಸಾವು ಸಂಭವಿಸಿದ್ದರೆ, ಕೋವಿಡ್ ಉಲ್ಬಣಗೊಂಡ 2021ರ ವರ್ಷದಲ್ಲಿ 1.02 ಕೋಟಿ ಸಾವು ಸಂಭವಿಸಿದೆ ಎಂಬುದಾಗಿ ಉಲ್ಲೇಖಿಸಲಾಗಿದೆ.

2007 ಮತ್ತು 2019 ರ ನಡುವಿನ ನಾಗರಿಕ ನೋಂದಣಿ ವ್ಯವಸ್ಥೆಯ ದತ್ತಾಂಶದ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷದಲ್ಲಿ ಸರಾಸರಿ 83.5 ಲಕ್ಷ ಜನರು ಸಾವಿಗೀಡಾಗಿದ್ದು. ಸರಾಸರಿ ಸಾವುಗಳ ಸಂಖ್ಯೆ 81 ರಿಂದ 86 ಲಕ್ಷದ ನಡುವೆ ಇದೆ. ಇತ್ತೀಚಿನ ವರ್ಷಗಳಲ್ಲಿ, ಸಾವಿನ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು 2013ರಲ್ಲಿ 70 ಪ್ರತಿಶತ, 2019ರಲ್ಲಿ 92 ಪ್ರತಿಶತಕ್ಕೆ ಏರಿಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net