

ನವದೆಹಲಿ: ಕರೊನಾ ಈ ಸಂಕಷ್ಟದ ಸಮಯದಲ್ಲಿ ಸಾಮಾನ್ಯ ಜನರದ್ದು, ವೈದ್ಯಕೀಯ ವಲಯದ ಸಿಬ್ಬಂದಿಯದು ಒಂದು ರೀತಿಯ ಸಮಸ್ಯೆಯಾದರೆ ಪೊಲೀಸ್ ಇಲಾಖೆಗೆ ಮತ್ತೊಂದು ರೀತಿಯ ಸಮಸ್ಯೆ. ಸೋಂಕಿತರ ನಿರ್ವಹಣೆಯಿಂದ ಹಿಡಿದು ಲಾಕ್ಡೌನ್ನಲ್ಲಿ ಜನರ ನಿರ್ವಹಣೆಯವರೆಗೂ ಕೆಲಸವೇ ಕೆಲಸ. ಹಗಲು ರಾತ್ರಿಯೆನ್ನದೆ ಕಷ್ಟಪಟ್ಟು ದುಡಿಯುತ್ತಿರುವ ಪೊಲೀಸರಲ್ಲಿ ಒಬ್ಬರು ದೆಹಲಿಯ ಎಎಸ್ಐ ರಾಕೇಶ್.
ರಾಕೇಶ್ (56) ಏಪ್ರಿಲ್ 13ರಿಂದ ಕೋವಿಡ್ ಸಂಬಂಧಿತ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತಾಗಾರವೊಂದರ ಬಳಿ ಅವರನ್ನು ಕೆಲಸಕ್ಕೆ ನಿಯೋಜಿಸಲಾಗಿದ್ದು, ಸೋಂಕಿತರ ಅಂತ್ಯಸಂಸ್ಕಾರದಲ್ಲಿ ಅವರು ನೆರವಾಗುತ್ತಿದ್ದಾರೆ. ಏಪ್ರಿಲ್ 13ರಿಂದ ಇಲ್ಲಿಯವರೆಗೆ ಸುಮಾರು 1,100ಕ್ಕೂ ಹೆಚ್ಚು ಸೋಂಕಿತರ ಅಂತ್ಯಸಂಸ್ಕಾರವನ್ನು ಅವರು ನಡೆಸಿಕೊಟ್ಟಿದ್ದಾರೆ. 50ಕ್ಕೂ ಹೆಚ್ಚು ಸೋಂಕಿತರಿಗೆ ಸ್ವತಃ ತಾವೇ ಕೊಳ್ಳಿಯಿಟ್ಟಿದ್ದಾರೆ.
ಇದೇ ಸಮಯದಲ್ಲಿ ಅವರ ಮಗಳ ಮದುವೆಯನ್ನೂ ನಿಶ್ಚಯಿಸಲಾಗಿತ್ತು. ಆದರೆ ಕೆಲಸದ ಒತ್ತಡ ಮತ್ತು ಜನರ ಸಂಕಷ್ಟವನ್ನು ಅರಿತಿದ್ದ ರಾಕೇಶ್ ಮದುವೆಯನ್ನು ಮುಂದೂಡಿದ್ದಾರೆ. ಈ ಸಂಕಷ್ಟ ತೀರಿದ ಮೇಲೆ ಮದುವೆ ಮಾಡುವ ನಿರ್ಧಾರ ಮಾಡಿದ್ದಾರೆ.
ರಾಕೇಶ್, ಆ್ಯಂಬುಲೆನ್ಸ್ನಿಂದ ಸೋಂಕಿತರ ಶವ ತಂದು ಅಂತ್ಯ ಸಂಸ್ಕಾರ ಮಾಡುವ ಕೆಲಸ ಮಾಡುತ್ತಿರುವ ವಿಡಿಯೋವನ್ನು ದೆಹಲಿ ಪೊಲೀಸ್ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ದೆಹಲಿ ಪೊಲೀಸ್ ಕಮಿಷನರ್ ಎಸ್ಎನ್ ಶ್ರೀವಾಸ್ತವ್ ಕೂಡ ಈ ವಿಡಿಯೋವನ್ನು ಹಂಚಿಕೊಂಡಿದ್ದು, ರಾಕೇಶ್ರನ್ನು ಪ್ರಶಂಶಿಸಿದ್ದಾರೆ. (ಏಜೆನ್ಸೀಸ್)