video/ ಕುಣಿಗಲ್​ ಶಾಸಕ ಡಾ.ರಂಗನಾಥ್​ಗೆ ಕರೊನಾ ಪಾಸಿಟಿವ್, ಕಾಂಗ್ರೆಸ್​ ನಾಯಕರಲ್ಲೂ ಸೋಂಕಿನ ಭೀತಿ

HDranganatha
Published on

ತುಮಕೂರು: ಕುಣಿಗಲ್​ ಕ್ಷೇತ್ರದ ಶಾಸಕ ಡಾ. ಎಚ್​.ಡಿ. ರಂಗನಾಥ್​ ಅವರಿಗೂ ಕರೊನಾ ಸೋಂಕು ತಗುಲಿದ್ದು, ರಾಜ್ಯ- ರಾಷ್ಟ್ರಮಟ್ಟದ ಕಾಂಗ್ರೆಸ್​ ವಲಯದಲ್ಲೂ ಆತಂಕ ಶುರುವಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪದಗ್ರಹಣ ಸ್ವೀಕಾರ ಸಮಾರಂಭದಲ್ಲೂ ಶಾಸಕ ರಂಗನಾಥ್​ ಮಂಚೂಣಿಯಲ್ಲಿ ನಿಂತು ಓಡಾಡಿದ್ದರು. ಎರಡು ದಿನಗಳ‌ ಹಿಂದಷ್ಟೇ ತಾಲೂಕಿನಲ್ಲಿ ಕರೊನಾ ಸೋಂಕು ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಲಾಕ್​ಡೌನ್ ಜಾರಿ ಕುರಿತು ಕುಣಿಗಲ್​ ಪಟ್ಟಣದಲ್ಲೂ ಶಾಸಕರು ಸಭೆ ನಡೆಸಿದ್ದರು. ಈ ವೇಳೆ ತಹಸೀಲ್ದಾರ್ ಮತ್ತು ಇಒ ಅವರು ಶಾಸಕರ ಅಕ್ಕಪಕ್ಕದಲ್ಲಿದ್ದರು. ಈಗ ಅವರು ಕೂಡ ಕ್ವಾರಂಟೈನ್‌ಗೆ ಒಳಗಾಗಲಿದ್ದು, ಇಡೀ ತಾಲೂಕು ಆಡಳಿತವೇ ಸ್ತಬ್ಧವಾಗಲಿದೆ. ಇದನ್ನೂ ಓದಿರಿ ಬಸ್​ ನಿಲ್ದಾಣದಲ್ಲೇ ಕರೊನಾ ಶಂಕಿತನ ಶವ ಬಿಟ್ಟು ಹೋದರು!

ಕುಣಿಗಲ್​ ಪಟ್ಟಣದ ಪೊಲೀಸ್​ ಠಾಣೆಯ ಪೇದೆಯೊಬ್ಬರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ನಿನ್ನೆ (ಭಾನುವಾರ) ಸಿಪಿಐ, ಎಸ್ಐ ಸೇರಿ 14 ಪೊಲೀಸರು ಕ್ವಾರಂಟೈನ್​ಗೆ ಒಳಗಾಗಿದ್ದರು. ಠಾಣೆಯನ್ನು ಸೀಲ್​ಡೌನ್​ ಮಾಡಲಾಗಿದೆ.

ಇತ್ತೀಚೆಗೆ (ಜು.2) ಬೆಂಗಳೂರಿನಲ್ಲಿ ನಡೆದ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲೂ ಶಾಸಕ ರಂಗನಾಥ್​ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಕೆ.ಸಿ.ವೇಣುಗೋಪಾಲ್​, ಮಲ್ಲಿಕಾರ್ಜುನ ಖರ್ಗೆ, ಬಿ.ಕೆ. ಹರಿಪ್ರಸಾದ್​, ಸಿದ್ದರಾಮಯ್ಯ, ರೇವಂತ್​ ರೆಡ್ಡಿ, ದಿನೇಶ್​ ಗುಂಡೂರಾವ್​ ಸೇರಿದಂತೆ ಸುಮಾರು 200 ಮುಖಂಡರು ಪಾಲ್ಗೊಂಡಿದ್ದರು. ಅಲ್ಲದೆ ಡಿಕೆಶಿ ಕುಟುಂಬಸ್ಥರೂ ಉಪಸ್ಥಿತರಿದ್ದರು. ಡಾ.ರಂಗನಾಥ್​ ಅವರು ಡಿಕೆಶಿ ಕುಟುಂಬದ ಆಪ್ತ ಸಂಬಂಧಿಕರು. ರಂಗನಾಥ್​ ಅವರು ಡಿಕೆಶಿ ಸೇರಿ ಎಲ್ಲ ಹಿರಿಯ ನಾಯಕರ ಬಳಿಗೆ ತೆರಳಿ ಮಾತನಾಡಿಸಿದ್ದರು. ಇದೀಗ ಶಾಸಕರಿಗೆ ಸೋಂಕು ದೃಢಪಟ್ಟ ವಿಚಾರ ಗೊತ್ತಾಗುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ್ದ ಮತ್ತು ಶಾಸಕರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರಲ್ಲೂ ಆತಂಕ ಶುರುವಾಗಿದೆ. ​

ಸೋಂಕಿತನ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ರಂಗನಾಥ್​ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದು, ಸೋಂಕು ತಗುಲಿರುವುದು ದೃಢವಾಗಿದೆ. ಈ ಬಗ್ಗೆ ಸ್ವತಃ ಶಾಸಕ ರಂಗನಾಥ್​ ಮಾತನಾಡಿರುವ ವಿಡಿಯೋವನ್ನು ತಮ್ಮ ಫೇಸ್​ಬುಕ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net