

ಬೆಂಗಳೂರು: ಕರೊನಾ ಲಸಿಕೆ ವಿತರಣೆಗೆ 2-3 ತಿಂಗಳಿಂದಲೂ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಮಾಡಿದ್ದೇವೆ. ಕೋಲ್ಡ್ ಸ್ಟೋರೇಜ್ ವ್ಯವಸ್ಥೆ, ಸರಬರಾಜು ಹೇಗೆಂಬ ಬಗ್ಗೆ ಚರ್ಚೆ ನಡೆಸಿದ್ದೇವೆ. ಕೇಂದ್ರ ಆರೋಗ್ಯ ಸಚಿವರ ಜತೆಗೂ 2 ಬಾರಿ ವೀಡಿಯೋ ಸಂವಾದ ಮಾಡಿದ್ದೇವೆ. ಎಲ್ಲ ಪೂರ್ವಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದರು.
‘ವಿಜಯವಾಣಿ’ ಕಚೇರಿಗೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಲಸಿಕೆಯನ್ನು ಮೊದಲು ಕರೊನಾ ಯೋಧರಾದ ವೈದ್ಯರು, ನರ್ಸಿಂಗ್, ಪ್ಯಾರಾಮೆಡಿಕಲ್ ಸಿಬ್ಬಂದಿ, ವೈದ್ಯ ವಿದ್ಯಾರ್ಥಿಗಳು ಸೇರಿ ಫ್ರಂಟ್ಲೈನ್ ಹೆಲ್ತ್ ವಾರಿಯರ್ಸ್ಗೆ ಕೊಡುತ್ತೇವೆ ಎಂದು ಹೇಳಿದರು.
ಇಲಾಖೆ ಜತೆ ಸತತವಾಗಿ ಕೆಲಸ ಮಾಡುವವರು, ವಯೋವೃದ್ಧರು, ಇತರ ಕಾಯಿಲೆ ಇರುವಂತಹವರ ಮ್ಯಾಪ್ ಮಾಡಿದ್ದೇವೆ. ಅವರಿಗೆ ಹಂತ ಹಂತವಾಗಿ ಪ್ರಾಧಾನ್ಯತೆ ನೀಡುತ್ತೇವೆ. ದೇಶೀಯ ಲಸಿಕೆ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಬೇಕು. ಆತ್ಮನಿರ್ಭರ ಭಾರತ ದಡಿ ನಮ್ಮ ದೇಶದ ಲಸಿಕೆ ವಿಶ್ವದ ಶೇ.15-20 ಜನರಿಗೆ ತಲುಪಲಿದೆ ಎಂದಾದರೆ ಹೆಮ್ಮೆಯ ಸಂಗತಿ ಎಂದರು.
ಸೋಂಕಿತರ ಪ್ರಮಾಣ ಅಧಿಕವಾಗಿರುವ ಕಡೆ ಹೆಚ್ಚು ನಿಗಾ ವಹಿಸಲಾಗಿತ್ತು, ಕಡಿಮೆ ಇರುವೆಡೆ ಹೆಚ್ಚು ಪರೀಕ್ಷೆ ನಡೆಸಲಾಗುತ್ತಿದೆ. ಸೋಂಕನ್ನು ಗಣನೀಯವಾಗಿ ಕಡಿಮೆ ಮಾಡಲು ನಾವು 8-9 ತಿಂಗಳ ಹಿಂದೆಯೇ ಪರೀಕ್ಷೆಗೆ ಹೆಚ್ಚು ಲ್ಯಾಬ್ ಮಾಡಿದೆವು. ಆರ್ಟಿಪಿಸಿಆರ್ ಟೆಸ್ಟ್ ಜಾಸ್ತಿ ಮಾಡಿದೆವು. ಬಹಳ ಬೇಗ ಸೋಂಕಿತರನ್ನು ಕಂಡು ಹಿಡಿದರೆ ಅವರ ಜತೆಗೆ ಮೊದಲ ಹಾಗೂ ಎರಡನೇ ಹಂತದ ಸಂರ್ಪತರನ್ನೂ ಪರೀಕ್ಷೆ ಮಾಡಿ ಗುಣಮಟ್ಟದ ಚಿಕಿತ್ಸೆ ಕೊಟ್ಟರೆ ಸಾವು-ನೋವು ಕಡಿಮೆ ಆಗುತ್ತದೆ ಎಂಬ ತಂತ್ರಗಾರಿಕೆ ರೂಪಿಸಿದೆವು. ಸೋಂಕಿತರ ಪ್ರಮಾಣ ತೀವ್ರವಾಗಿ ಉಲ್ಬಣಗೊಂಡಾಗಲೂ ಧೃತಿಗೆಡಲಿಲ್ಲ. ಪರೀಕ್ಷೆ ಪ್ರಮಾಣವನ್ನೂ ಕಡಿಮೆ ಮಾಡಲಿಲ್ಲ. ಇತ್ತೀಚೆಗೆ ಸೋಂಕಿತರ ಪ್ರಮಾಣ ಕಡಿಮೆ ಆಗುತ್ತಿದ್ದರೂ ನಾವು ಪ್ರತಿ ನಿತ್ಯ 1.25 ಲಕ್ಷ ಪರೀಕ್ಷೆ ಮಾಡುತ್ತಿದ್ದೇವೆ ಎಂದು ವಿವರಿಸಿದರು.
ಯಾವ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಹೆಚ್ಚಿದೆಯೋ ಅಂತಹ ಕಡೆ ಹೆಚ್ಚು ಗಮನಕೊಡಲು ಹೇಳಿದ್ದೇವೆ. ಕಡಿಮೆ ಇರುವ ಕಡೆ ಹೆಚ್ಚು ಟೆಸ್ಟ್ ಮಾಡುತ್ತಿದ್ದೇವೆ. ಇದು ಕರೊನಾ ಹತೋಟಿಗೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.
ಕೋಲ್ಡ್ ಸ್ಟೋರೇಜ್ ವ್ಯವಸ್ಥೆ
ಲಸಿಕೆ ಸಂಗ್ರಹಕ್ಕೆ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಮಾಡಿದ್ದೇವೆ. ಯಾವುದೇ ಕ್ಷಣದಲ್ಲಿ ಲಸಿಕೆ ಸರಬರಾಜಾದರೂ ದಾಸ್ತಾನಿಗೆ ಸಿದ್ಧರಿದ್ದೇವೆ. ಸದ್ಯಕ್ಕೆ ಖಾಸಗಿ ಆಸ್ಪತ್ರೆ ಜತೆ ಕೋಲ್ಡ್ ಸ್ಟೋರೇಜ್ ಬಗ್ಗೆ ಮಾತನಾಡಿಲ್ಲ. ಖಾಸಗಿಯಲ್ಲೇ ಲಸಿಕೆ ತೆಗೆದುಕೊಳ್ಳುವ ಮನಸ್ಥಿತಿ ಇರುವವರೂ ಇದ್ದಾರೆ. ಅವರಿಗೂ ಸರಬರಾಜು ಮಾಡುವ ಆಲೋಚನೆ ಇದೆ ಎಂದು ಸುಧಾಕರ್ ತಿಳಿಸಿದರು.
2ನೇ ಅಲೆ ಈಗಲೇ ಹೇಳಲಾಗದು
ಮೊದಲ ಅಲೆ ಕನಿಷ್ಠ ಸ್ಥಿರತೆಗೆ ಬಂದ 2-3 ತಿಂಗಳ ನಂತರ ಸ್ವಾಭಾವಿಕವಾಗಿ 2ನೇ ಅಲೆ ಬರುತ್ತದೆ. ಫ್ರಾನ್ಸ್, ಇಂಗ್ಲೆಂಡ್ ಮತ್ತಿತರ ರಾಷ್ಟ್ರದಲ್ಲಿ ಆದೇ ರೀತಿ ಆಗಿದೆ. ನಮ್ಮಲ್ಲಿ 2ನೇ ಅಲೆ ಜನವರಿ ನಂತರ ಬರಬಹುದು. ಬರದೆಯೂ ಇರಬಹುದು ಎಂದು ಡಾ. ಸುಧಾಕರ್ ಅಭಿಪ್ರಾಯಪಟ್ಟರು. ಸೆ.23ರ ವೇಳೆಗೆ ಶೇ.27 ಜನರಿಗೆ ಸೋಂಕು ಬಂದು ಹೋಗಿದೆ ಎಂದು ಸರ್ವೆ ಹೇಳಿದೆ. ಡಿಸೆಂಬರ್ ಅಂತ್ಯಕ್ಕೆ ಅದರ ಪ್ರಮಾಣವೆಷ್ಟು ಅಂತ ನೋಡಬೇಕಾಗುತ್ತದೆ. ವೈರಾಣು ಶಕ್ತಿ ಕೂಡ ಮೊದಲಿದ್ದಷ್ಟು ಇರುವಂತಿಲ್ಲ ಎಂದು ಪರಿಣಿತರು ಹೇಳುತ್ತಾರೆ. ಇದೆಲ್ಲವನ್ನೂ ಆಧರಿಸಿ 2ನೇ ಅಲೆ ಬಗ್ಗೆ ಮಾತನಾಡಬೇಕಾಗುತ್ತದೆ ಎಂದರು.
ಬೆಂಗಳೂರಿನ ವಿಜಯವಾಣಿ ಕಚೇರಿಗೆ ಮಂಗಳವಾರ ಆಗಮಿಸಿದ ಆರೋಗ್ಯ ಸಚಿವ ಸುಧಾಕರ್ ಅವರನ್ನು ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರು ಹೂವಿನ ಸಸಿ ನೀಡಿ ಬರಮಾಡಿಕೊಂಡರು.