ಆಸ್ಪತ್ರೆಯಿಂದ ಕರೊನಾ ರೋಗಿಯ ನಾಪತ್ತೆ... ಶವವಾಗಿ ಪತ್ತೆ... ಎಲ್ಲವೂ ನಿಗೂಢ!

corona-missingweb
Published on

ಮುಂಬೈ: ಕರೊನಾ ಸೋಂಕಿತರಿಂದ ತತ್ತರಿಸಿ ಹೋಗಿರುವ ಮುಂಬೈನಲ್ಲಿ ಈಗ ನಿಸರ್ಗ ಚಂಡಮಾರುತದ ಭೀತಿ. ಅದರ ನಡುವೆಯೇ ಕರೊನಾ ಸೋಂಕಿತನೊಬ್ಬನ ನಿಗೂಢ ನಾಪತ್ತೆ ಪ್ರಕರಣ ಮಹಾರಾಷ್ಟ್ರ ಸರ್ಕಾರವನ್ನು ಇನ್ನಷ್ಟು ಪೇಚಿಗೆ ಸಿಲುಕಿಸಿದೆ.

ಕರೊನಾ ಸೋಂಕಿತರನ್ನು ನಿಭಾಯಿಸಲು ಸಾಧ್ಯವಾಗದೇ ವೈದ್ಯಕೀಯ ಸಿಬ್ಬಂದಿ ನಲುಗಿ ಹೋಗಿದ್ದಾರೆ. ದಿನದಿಂದ ದಿನಕ್ಕೆ ಸೋಂಕಿನಿಂದ ಸಾಯುತ್ತಿರುವವರ ಸಂಖ್ಯೆ ಏರುತ್ತಲೇ ಇದ್ದು, ಶವಗಳನ್ನು ಪಡೆಯಲು ಸಂಬಂಧಿಕರು ಬರದದ್ದು ಇನ್ನೊಂದೆಡೆ ಸಮಸ್ಯೆಗೆ ಕಾರಣವಾಗಿದೆ. ಈ ನಡುವೆಯೇ ಕರೊನಾ ಸೋಂಕಿತನೊಬ್ಬ ಐಸಿಯುನಿಂದ ನಿಗೂಢ ಕಣ್ಮರೆಯಾಗಿದ್ದು ಆಸ್ಪತ್ರೆಯ ಗಮನಕ್ಕೆ ಬಾರದೇ ಇರುವುದು ಇನ್ನಷ್ಟು ಸಮಸ್ಯೆಯನ್ನು ತಂದೊಡ್ಡಿದೆ. ಕಣ್ಮರೆಯಾಗಿರುವುದು ಒಂದೆಡೆಯಾದರೆ, ಅದರ ನಂತರದ ಬೆಳವಣಿಗೆ ಇನ್ನಷ್ಟು ತೊಂದರೆಗೀಡುಮಾಡಿದೆ.

ಅಷ್ಟಕ್ಕೂ ಆಗಿದ್ದೇನೆಂದರೆ, ರಾಕೇಶ್​ ವರ್ಮ ಎಂಬ 67 ವರ್ಷದ ವ್ಯಕ್ತಿಯನ್ನು ಮೇ 14ರಂದು ಮುಂಬೈನ ಕೆಇಎಂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ಪರೀಕ್ಷೆಯಲ್ಲಿ ಅವರಿಗೆ ಕರೊನಾ ಸೋಂಕು ಇದ್ದಿರುವುದು ಪತ್ತೆಯಾಗಿತ್ತು. ಸಮಸ್ಯೆ ಗಂಭೀರವಾಗಿದ್ದರಿಂದ ಅವರನ್ನು ಐಸಿಯುಗೆ ಸ್ಥಳಾಂತರಿಸಿದ್ದರು. ಆದರೆ ಮೇ 19ರಂದು ಅವರು ನಾಪತ್ತೆಯಾಗಿದ್ದರು. ಈ ಬಗ್ಗೆ ಆಸ್ಪತ್ರೆಯಲ್ಲಿ ಯಾರಿಗೂ ತಿಳಿದೇ ಇರಲಿಲ್ಲ!

ನಾಲ್ಕೈದು ದಿನಗಳ ನಂತರ ಕುಟುಂಬದ ಸದಸ್ಯರು ಆಸ್ಪತ್ರೆಗೆ ಬಂದಾಗಲೇ ಅವರಿಗೆ ವಿಷಯ ತಿಳಿದದ್ದು. ಆಸ್ಪತ್ರೆಯ ಸಿಬ್ಬಂದಿಯನ್ನು ಕೇಳಿದಾಗ ಅವರ ಬಳಿ ಯಾವುದೇ ಉತ್ತರ ಇರಲಿಲ್ಲ. ಇದರಿಂದ ಗಾಬರಿಗೊಂಡ ಸದಸ್ಯರು ನಾಪತ್ತೆ ದೂರು ದಾಖಲಿಸಿದರು.

ಪೊಲೀಸರು ಸಾಕಷ್ಟು ಹುಡುಕಾಡಿದರೂ ಅವರಿಗೆ ರಾಕೇಶ್​ ಅವರು ಸಿಕ್ಕಿರಲಿಲ್ಲ. ಈ ನಾಪತ್ತೆ ಪ್ರಕರಣ ಪೊಲೀಸರ ತಲೆ ಕೆಡಿಸಿತು. ಆದರೆ ವ್ಯಕ್ತಿ ಮಾತ್ರ ಸಿಗಲೇ ಇಲ್ಲ.

ಅದಾದ ಕೆಲವು ದಿನಗಳ ನಂತರ, ರಾಕೇಶ್​ ಬಗ್ಗೆ ಪತ್ತೆಯಾಯಿತು. ಆದರೆ ಅದಾಗಲೇ ಅವರು ಸತ್ತು ಅವರ ಶವಸಂಸ್ಕಾರವೂ ಆಗಿ ಹೋಗಿತ್ತು!

ಆದದ್ದೇನೆಂದರೆ, ರಸ್ತೆಯ ಬದಿಯಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬ ಬಿದ್ದುದ್ದನ್ನು ಕಂಡ ಜನರು ಅದನ್ನು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿ ವಾರಸುದಾರರು ಯಾರೂ ಇಲ್ಲ, ಇದೊಂದು ಅನಾಥ ಶವ ಇರಬಹುದು ಎಂದು ಹೇಳಲಾಗಿದೆ. ಪೊಲೀಸರಲ್ಲಿ ವಿಚಾರಿಸಲಾಗಲೂ ಅನಾಥ ಶವ ಎಂದೇ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಸಿಬ್ಬಂದಿ ಆ ವ್ಯಕ್ತಿಯ ಗುರುತು ಸಿಗದ ಕಾರಣ, ಅವರ ಶವಸಂಸ್ಕಾರವನ್ನೂ ನೆರವೇರಿಸಿ ಬಿಟ್ಟಿದ್ದಾರೆ!

ಏಕಾಏಕಿ ಈ ವ್ಯಕ್ತಿ ಮೃತಪಟ್ಟಿದ್ದು ಹೇಗೆ? ಕುಟುಂದವರನ್ನು ಗುರುತು ಹಚ್ಚುವ ಬದಲು ಶವಸಂಸ್ಕಾರ ಮಾಡಿದ್ದು ಏಕೆ ಎಂಬಿತ್ಯಾದಿ ಕಾರಣಗಳು ನಿಗೂಢವಾಗಿಯೇ ಉಳಿದಿದೆ. ಪೊಲೀಸರಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದರೂ ಪೊಲೀಸರು ಏಕೆ ಕ್ರಮ ತೆಗೆದುಕೊಂಡಿಲ್ಲ ಎಂಬ ಬಗ್ಗೆಯೂ ರಹಸ್ಯವಾಗಿಯೇ ಉಳಿದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net