ಕರೊನಾಗೆ ಒಣ ಗಾಳಿಯೇ ಅಸ್ತ್ರ, ಕೋವಿಡ್​ ಕಾಲವಾಗಬಹುದು ಚಳಿಗಾಲ ಎಚ್ಚರ...!

covid 19
Published on

ನವದೆಹಲಿ: ಕರೊನಾಗೂ ಕಾಲಮಾನಕ್ಕೂ ಸಂಬಂಧವಿದೆ ಎಂದು ಹಲವು ಅಧ್ಯಯನಗಳು ವಾದಿಸುತ್ತಲೇ ಬಂದಿವೆ. ಕೋವಿಡ್​ಗೆ ಕಾರಣವಾಗುವ ವೈರಸ್​ ಹೆಚ್ಚಿನ ತಾಪಮಾನದಲ್ಲಿ ಬದುಕಲ್ಲ, ಈ ವೈರಸ್​ ಗಾಳಿಯಿಂದ ಹಬ್ಬುತ್ತದೆ ಎಂಬೆಲ್ಲ ವಾದಗಳು ಕೇಳಿ ಬಂದವು. ಅದನ್ನು ಕೆಲ ತಜ್ಞರು ನಿರಾಕರಿಸುತ್ತಲೇ ಬಂದಿದ್ದಾರೆ.

ಆದರೆ, ಕೋವಿಡ್​ಗೂ ವಾತಾವರಣದಲ್ಲಾಗುವ ಬದಲಾವಣೆಗೂ ಹತ್ತಿರದ ಸಂಬಂಧವಿದೆ ಎಂದು ಆಸ್ಟ್ರೇಲಿಯಾದ ಸಿಡ್ನಿ ವಿವಿ ಸಂಶೋಧಕರು ಹೇಳಿದ್ದಾರೆ. ಅದರಂತೆ, ವಾತಾವರಣದ ತೇವಾಂಶ ಅಥವಾ ಆದೃತೆಯಲ್ಲಿ ಶೇ.1ರಷ್ಟು ಕಡಿಮೆಯಾದರೆ ಕೋವಿಡ್​ ಪ್ರಕರಣಗಳಲ್ಲಿ ಶೇ.6 ರಷ್ಟು ಹೆಚ್ಚಳವಾಗುತ್ತದೆ ಎಂಬುದನ್ನು ಆಸ್ಟ್ರೇಲಿಯಾದಲ್ಲಿ ನಡೆಸಿದ ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ. ಟ್ರಾನ್ಸ್​ಬೌಂಡರಿ ಆ್ಯಂಡ್​ ಎಮರ್ಜಿಂಗ್​ ಡೀಸಿಸ್​ ಎಂಬ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ವರದಿಯಲ್ಲಿ ಇದನ್ನು ಉಲ್ಲೇಖಿಸಲಾಗಿದೆ.

ಕೋವಿಡ್​ ಕಾಲಮಾನ ಆಧರಿಸಿದ ಕಾಯಿಲೆಯಾಗಿರಲಿದೆ. ಅದರಂತೆ ಚಳಿಗಾಲವೆಂದರೆ ಕೋವಿಡ್​ ಕಾಲವೆಂದು ಹೇಳಬಹುದು ಎಂದು ಸಿಡ್ನಿ ವಿವಿಯಲ್ಲಿ ಸಾಂಕ್ರಾಮಿಕ ರೋಗಗಳ ಸಂಶೋಧಕ ಮೈಕಲ್​ ವಾರ್ಡ್​ ಹೇಳಿದ್ದಾರೆ.

ಈ ಅಧ್ಯಯನದಲ್ಲಿ ಪ್ರಮುಖವಾಗಿ ಕಂಡುಕೊಳ್ಳಲಾಗಿರುವ ಅಂಶವೆಂದರೆ, ನಾವು ಸೀನಿದಾಗ ಅಥವಾ ಕೆಮ್ಮಿದಾಗ ಅದರಲ್ಲಿರುವ ಕಣಗಳು ತೀರಾ ಸೂಕ್ಷ್ಮ ಹಾಗು ಹಗುರವಾಗಿರುತ್ತವೆ. ಒಂದು ವೇಳೆ ಗಾಳಿಯಲ್ಲಿ ತೇವಾಂಶ ಕಡಿಮೆ ಇದ್ದರೆ, ಅವು ಬಹುಕಾಲ ಗಾಳಿಯಲ್ಲಿಯೇ ಉಳಿದುಕೊಳ್ಳುತ್ತವೆ. ಆ ಮೂಲಕ ಇತರರಿಗೆ ಹಬ್ಬುವ ಸಂಭಾವ್ಯತೆ ಹೆಚ್ಚು. ಅದೇ ಗಾಳಿಯಲ್ಲಿನ ತೇವಾಂಶ ಹೆಚ್ಚಾದರೆ, ಈ ಕಣಗಳು ಹೆಚ್ಚು ವಿಸ್ತಾರ ಹಾಗೂ ಭಾರವಾಗುತ್ತವೆ. ಆಗ ತ್ವರಿತವಾಗಿ ಭೂಮಿಗಿಳಿಯುತ್ತವೆ. ಇದರಿಂದ ಹಬ್ಬುವಿಕೆಯ ಪ್ರಮಾಣದಲ್ಲಿ ಇಳಿಮುಖವಾಗುತ್ತದೆ ಎನ್ನುವುದು ಈ ಸಂಶೋಧನೆಯ ಸಾರಾಂಶ.

ಹೀಗಾಗಿ ಒಣಗಾಳಿಯಿರುವ ಪ್ರದೇಶಗಳಲ್ಲಿ ಕೋವಿಡ್​ ವ್ಯಾಪಿಸುವ ಸಾಧ್ಯತೆ ಹೆಚ್ಚಾಗಿದೆ. ಈ ಹಿಂದೆ ಸಾರ್ಸ್​ ಹಾಗೂ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಕಾಣಿಸಿಕೊಂಡ ಮೆರ್ಸ್​ ಕಾಯಿಲೆಗೂ ವಾತಾವರಣದೊಂದಿಗೆ ನೇರ ಸಂಬಂಧವಿರುವುದು ಗೊತ್ತಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಚೀನಾದಲ್ಲಿ ಕರೊನಾ ಹರಡುವುದಕ್ಕೂ ಅಲ್ಲಿನ ದೈನಂದಿನ ಉಷ್ಣಾಂಶ ಹಾಗೂ ವಾತಾವರಣದ ತೇವಂಶಕ್ಕೂ ನೇರ ಸಂಬಂಧವಿರುವುದು ಗೊತ್ತಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ, ಈ ನಿಟ್ಟಿನಲ್ಲಿ ಇನ್ನಷ್ಟು ಸಂಶೋಧನೆ ಅಗತ್ಯ ಎನ್ನುವುದು ವರದಿಯ ಉಪಸಂಹಾರವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net