ಹಾಂಗ್‌ಕಾಂಗ್‌ನಲ್ಲೇ ಉಳಿದುಬಿಟ್ಟಿವೆ ಕರ್ನಾಟಕಕ್ಕೆ ಬರಬೇಕಿದ್ದ ಕರೊನಾ ಟೆಸ್ಟ್ ಕಿಟ್‌ಗಳು!

Antiboitic 15 april 20
Published on

ನವದೆಹಲಿ: ಕರೊನಾ ವೈರಸ್ ಪರೀಕ್ಷೆಗೆ ಅತ್ಯಗತ್ಯವಾಗಿ ಬೇಕಾಗಿರುವ ಟೆಸ್ಟ್ ಕಿಟ್‌ಗಳಿಗೆ ಆರ್ಡರ್ ಮಾಡಿ ಕಾದಿದ್ದೇ ಬಂತು. ಕರ್ನಾಟಕವೂ ಸೇರಿದಂತೆ ಆರು ರಾಜ್ಯಗಳಿಗೆ ಚೀನಾದಿಂದ ಬರಬೇಕಾಗಿದ್ದ ಟೆಸ್ಟ್ ಕಿಟ್‌ಗಳು ಹಾಂಗ್‌ಕಾಂಗ್ ವಿಮಾನ ನಿಲ್ದಾಣದಲ್ಲೇ ಉಳಿದುಬಿಟ್ಟಿವೆ.

ಯಾವುದೇ ಕಂಪನಿ ತನ್ನ ಉತ್ಪನ್ನಗಳನ್ನು ರಫ್ತು ಮಾಡಬೇಕಾಗಿದ್ದಲ್ಲಿ ಅಲ್ಲಿನ ಸರ್ಕಾರದ ಅನುಮತಿ ಪಡೆಯುವುದನ್ನು ಚೀನಾ ಕಡ್ಡಾಯ ಮಾಡಿರುವುದರಿಂದ ಈ ತೊಂದರೆ ಉಂಟಾಗಿದೆ. ಸಿಂಗಪೂರ್ ಮೂಲದ ಸೆನ್ಸಿಂಗ್ ಸೆಲ್ಫ್ ಲಿಮಿಟೆಡ್ ಮತ್ತು ಚೀನಾದ ವೊಂಡ್‌ಫೋ ಕಂಪನಿಗಳು ಮಾತ್ರ ಈ ಕಿಟ್‌ಗಳನ್ನು ಪೂರೈಸಬಹುದೆಂದು ಪುಣೆಯ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ವೈರಾಲಜಿ ಅನುಮತಿ ನೀಡಿದೆ.

ಕರ್ನಾಟಕ ಮಾತ್ರವಲ್ಲದೆ, ಮೇಘಾಲಯ, ಆಂಧ್ರ, ಕೇರಳ, ರಾಜಸ್ಥಾನ ಮತ್ತು ಗುಜರಾತ್‌ನ ಟೆಸ್ಟ್ ಕಿಟ್‌ಗಳೂ ಹಾಂಗ್‌ಕಾಂಗ್‌ನಲ್ಲೇ ಉಳಿದಿವೆ. ಮೊದಲು ಚೀನಾದ ಕಾರ್ಖಾನೆಗಳು ಇಂತಹ ಕಿಟ್‌ಗಳನ್ನು ಸ್ವತಂತ್ರವಾಗಿ ರಫ್ತು ಮಾಡುತ್ತಿದ್ದವು. ಕರೊನಾ ಹಿನ್ನೆಲೆಯಲ್ಲಿ ನಿಯಮ ಬಿಗಿ ಮಾಡಿದ ಚೀನಾ ಸರ್ಕಾರ, ರಫ್ತಿಗೆ ಮುನ್ನ ಅನುಮತಿ ಕಡ್ಡಾಯವೆಂದು ಏಪ್ರಿಲ್ ಆರಂಭದಲ್ಲಿಯೇ ಆದೇಶ ಹೊರಡಿಸಿತು.

ಈಗ ಆ ಕಿಟ್‌ಗಳನ್ನು ಭಾರತಕ್ಕೆ ತ್ವರಿತವಾಗಿ ತರಿಸಲು ನೆರವು ನೀಡುವಂತೆ ಎಲ್ಲ ರಾಜ್ಯಗಳು ಪ್ರಧಾನಿ ಕಚೇರಿಗೆ ದುಂಬಾಲು ಬಿದ್ದಿವೆ. ಚೀನಾದಲ್ಲಿರುವ ಭಾರತದ ರಾಯಭಾರಿಯ ಮೂಲಕವೂ ಪ್ರಯತ್ನ ನಡೆದಿದೆ. ಈ ಕಿಟ್‌ಗಳು ಬಂದ ಮೇಲೆಯೇ ಕರೊನಾ ಪರೀಕ್ಷೆ ಇನ್ನಷ್ಟು ತ್ವರಿತಗೊಳ್ಳಲು ಸಾಧ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net