

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ಗೆ ವ್ಯಕ್ತಿಯೊಬ್ಬ ಬಲಿಯಾದ ಬೆನ್ನಲ್ಲೇ, ಸೋಂಕಿನ ಲಕ್ಷಣ ಹೊಂದಿರುವವರನ್ನು ಪರೀಕ್ಷೆ ಮಾಡಲು ಸರ್ಕಾರ ಸೂಚನೆ ನೀಡಿದೆ. ಇದು ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದ್ದು, ನಾಗರಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಈ ಮಧ್ಯೆ ರಾಜ್ಯದೆಲ್ಲೆಡೆ ಕಟ್ಟೆಚ್ಚರ ವಹಿಸುವಂತೆ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ. ಜತೆಗೆ ಆರೋಗ್ಯ ಇಲಾಖೆಯು ಎಲ್ಲ ಜಿಲ್ಲೆಗಳಲ್ಲಿ ಸೋಂಕಿತರ ಬಗ್ಗೆ ನಿಗಾ ವಹಿಸುವಂತೆ ಸೂಚಿಸಿ, ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಮುಂದಾಗಿದೆ.
ಪ್ರಸ್ತುತ ರಾಜ್ಯದಲ್ಲಿ 47 ಸೋಂಕಿನ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ರಾಜಧಾನಿ ಬೆಂಗಳೂರು ಒಂದರಲ್ಲೇ 32 ಪ್ರಕರಣಗಳು ದಾಖಲಾಗಿವೆ. ಉಳಿದಂತೆ ಮೈಸೂರು, ಬೆಂಗಳೂರು ಗ್ರಾಮಾಂತರ ಬಳ್ಳಾರಿ ಹಾಗೂ ವಿಜಯನಗರದಲ್ಲಿ ಸೋಂಕಿತರು ಕಂಡುಬಂದಿದ್ದಾರೆ. ಇತರ ಜಿಲ್ಲೆಗಳಲ್ಲೂ ಸೋಂಕಿನ ಲಕ್ಷಣ ಕಾಣಿಸಿಕೊಳ್ಳಲಾರಂಭಿಸಿರುವುದರಿಂದ ಆಯಾ ಜಿಲ್ಲಾ ಆರೋಗ್ಯಾಧಿಕಾರಿಗಳು (ಡಿಎಚ್‌ಒ) ಜಿಲ್ಲಾಡಳಿತದ ಸಹಯೋಗದಲ್ಲಿ ಸೋಂಕು ಪ್ರಕರಣಗಳ ಬಗ್ಗೆ ನಿಗಾ ಇಡಲು ಆರೋಗ್ಯ ಇಲಾಖೆ ಸೂಚಿಸಿದೆ.
ಸೋಂಕಿತರ ಪರೀಕ್ಷೆ ಆರಂಭ:
ಆರೋಗ್ಯ ಇಲಾಖೆಯ ಸೂಚನೆ ಅನ್ವಯ ಸೋಂಕಿತರು ಕಂಡುಬಂದಿರುವ ಜಿಲ್ಲೆಗಳಲ್ಲಿ ‘ಸಾರಿ’ ಪ್ರಕರಣಗಳ ಪರೀಕ್ಷೆಗೆ ಚಾಲನೆ ದೊರೆತಿದೆ. ಸದ್ಯ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆ ಇರುವುದರಿಂದ ವಿಆರ್‌ಡಿಎಲ್ ಟೆಸ್ಟಿಂಗ್ ಸೌಲಭ್ಯವಿರುವ ಕೇಂದ್ರಗಳಲ್ಲಿ ಕೋವಿಡ್ ಟೆಸ್ಟಿಂಗ್ ನಡೆಸಲಾಗುತ್ತಿದೆ. ಬೆಂಗಳೂರಿನಲ್ಲಿ ನಿಮ್ಹಾನ್ಸ್ ಆಸ್ಪತ್ರೆ, ಬೆಂಗಳೂರು ಮೆಡಿಕಲ್ ಕಾಲೇಜು, ಎನ್‌ಐವಿ ಕೇಂದ್ರ ಸೇರಿ ರಾಜ್ಯದ 10 ಕಡೆಗಳಲ್ಲಿ ಟೆಸ್ಟಿಂಗ್‌ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಸದ್ಯ ಸೋಂಕಿತರನ್ನು ಪರೀಕ್ಷಿಸಲು ಅಗತ್ಯ ಟೆಸ್ಟಿಂಗ್ ಕಿಟ್ ಲಭ್ಯವಿದೆ. ಮುಂದಿನ ದಿನಗಳಲ್ಲಿ ಪ್ರಕರಣಗಳು ಹೆಚ್ಚಾದಲ್ಲಿ ಪರೀಕ್ಷೆಯನ್ನು ದುಪ್ಪಟ್ಟುಗೊಳಿಸಬೇಕಾಗುತ್ತದೆ. ಹೀಗಾಗಿ ಒಂದು ತಿಂಗಳಿಗೆ ಬೇಕಾಗಬಹುದಾದ 5 ಸಾವಿರ ಆರ್‌ಟಿಪಿಸಿಆರ್ ಟೆಸ್ಟಿಂಗ್ ಕಿಟ್ ಖರೀದಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಹಾಗಾಗಿ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
ಸೋಂಕು ಏರಿಕೆಗೆ ಕಾರಣವೇನು?:
ಸದ್ಯ ರಾಜ್ಯದೆಲ್ಲೆಡೆ ಭಾರಿ ಮಳೆ ಸುರಿಯುತ್ತಿದೆ. ಇದರಿಂದಾಗಿ ಹವಾಮಾನ ಬದಲಾವಣೆಯಾಗಿದ್ದು, ಅದರಲ್ಲೂ ಶೀತ ಸಂಬಂಧಿ ಸಮಸ್ಯೆ ಜನರನ್ನು ಕಾಡಲಾರಂಭಿಸಿದೆ. ಬೆಂಗಳೂರಿನಲ್ಲಿ ಮಳೆ ಹಾಗೂ ಥಂಡಿಯ ವಾತಾವರಣ ಇರುವುದರಿಂದ ಅನ್ಯ ರೋಗ ಬಾಧೆಗೆ ಒಳಗಾಗಿರುವವರಿಗೆ ಕೋವಿಡ್ ಸೋಂಕು ತಗುಲುವ ಸಾಧ್ಯತೆ ಇದೆ. ಅದರಲ್ಲೂ ಉಸಿರಾಟ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲು ಸೂಚಿಸಲಾಗಿದೆ. ಈ ಮಧ್ಯೆ ಜನರು ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.
ಆರೋಗ್ಯ ಇಲಾಖೆಯ ಸೂಚನೆ ಏನು?:
* ಎಲ್ಲ ಸಾರಿ ಪ್ರಕರಣಗಳಲ್ಲಿ ಕಡ್ಡಾಯ ಪರೀಕ್ಷೆ
* ವೃದ್ಧರು, ಮಕ್ಕಳು, ಗರ್ಭಣಿಯರಲ್ಲಿ ರೋಗ ಲಕ್ಷಣ ಕಂಡಲ್ಲಿ ಕಡ್ಡಾಯ ಪರೀಕ್ಷೆ
* ಕೋವಿಡ್ ಪರೀಕ್ಷಾ ಮಾದರಿ ಲ್ಯಾಬ್‌ಗಳಿಗೆ ಅದೇ ದಿನ ತಲುಪುವಂತೆ ಕ್ರಮ
ಮತ್ತೆ 9 ಪ್ರಕರಣ ದೃಢ:
ರಾಜ್ಯದಲ್ಲಿ ಭಾನುವಾರ ಮತ್ತೆ 9 ಪ್ರಕರಣಗಳು ದೃಢಪಟ್ಟಿದ್ದು, ಕೋವಿಡ್ ಪಾಸಿಟೀವ್ ಹೊಂದಿರುವವರ ಸಂಖ್ಯೆ 47ಕ್ಕೆ ಏರಿದೆ. 104 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಿದ್ದು, ಈ ಪೈಕಿ 96 ಜನರಿಗೆ ಆರ್‌ಟಿಪಿಸಿಆರ್ ಟೆಸ್ಟಿಂಗ್ ಮಾಡಲಾಗಿದೆ. ಇಡೀ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು 47 ಇದ್ದು, ಇವುಗಳಲ್ಲಿ 46 ಮಂದಿ ಮನೆಯಲ್ಲೇ ನಿಗಾ ವ್ಯವಸ್ಥೆಯಲ್ಲಿದ್ದಾರೆ. ಒಬ್ಬರು ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಜನರು ವಹಿಸಬೇಕಾದ ಮುನ್ನೆಚ್ಚರಿಕೆ ಏನು?:
* ಶೀತ ಸಂಬಂಧಿ ಕಾಯಿಲೆ ನಿರ್ಲಕ್ಷಿಸದೆ ವೈದರ ಬಳಿ ಪರೀಕ್ಷಿಸಿಕೊಳ್ಳಿರಿ
* ಕಾಯಿಲೆಗೆ ಒಳಗಾದ ವೃದ್ಧರು, ಗರ್ಭಿಣಿ/ಬಾಣಂತಿಯರ ಆರೋಗ್ಯ ಕಾಳಜಿ ವಹಿಸಿ
* ಸಾರ್ವಜನಿಕ ಸ್ಥಳಗಳು, ಮನೆಗಳಲ್ಲಿ ನೈರ್ಮಲ್ಯ ಕಾಪಾಡಲು ಆದ್ಯತೆ ನೀಡಿ
* ಜ್ವರ, ಕೆಮ್ಮು, ನೆಗಡಿ ಹೆಚ್ಚು ದಿನ ಇದ್ದಲ್ಲಿ ತಪ್ಪದೆ ವೈದ್ಯರಿಂದ ಚಿಕಿತ್ಸೆ ಪಡೆಯಿರಿ
* ಸಾರ್ವಜನಿಕ ಸ್ಥಳಗಳಲ್ಲಿ ಸ್ವಇಚ್ಛೆಯಿಂದ ಮಾಸ್ಕ್ ಧರಿಸಬಹುದು (ಕಡ್ಡಾಯ ಮಾಡಿಲ್ಲ)