

ಬೆಂಗಳೂರು: ಸೋಂಕಿತರನ್ನು ಆಸ್ಪತ್ರೆಗೆ ರವಾನಿಸಲು ಬಿಬಿಎಂಪಿಯ ಎಲ್ಲ ವಾರ್ಡ್ಗಳಿಗೆ ಪ್ರತ್ಯೇಕ ಆಂಬುಲೆನ್ಸ್ ಮೀಸಲಿಡಲಾಗುವುದು ಎಂದು ಬೆಂಗಳೂರು ಕರೊನಾ ನಿಯಂತ್ರಣ ಉಸ್ತುವಾರಿ ಆರ್. ಅಶೋಕ್ ತಿಳಿಸಿದ್ದಾರೆ.
ಇಂದಿರಾನಗರದ ಸಿ.ವಿ. ರಾಮನ್ ಆಸ್ಪತ್ರೆಗೆ ಭಾನುವಾರ ಭೇಟಿ ನೀಡಿ, ರಾಜಧಾನಿಯಲ್ಲಿ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದು, ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಸಿಗದೇ ರೋಗಿಗಳು ಪರದಾಡುತ್ತಿದ್ದಾರೆ. ಈಗ ಪ್ರತಿ 2 ವಾರ್ಡ್ಗಳಿಗೆ ತಲಾ ಒಂದು ಆಂಬುಲೆನ್ಸ್ಗಳನ್ನು ಮೀಸಲಿಡಲಾಗಿದೆ. ಇವುಗಳೂ ಸಾಲುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿ ರುವ ಹಿನ್ನೆಲೆಯಲ್ಲಿ, ಪ್ರತಿ ವಾರ್ಡ್ಗೊಂದು ಆಂಬುಲೆನ್ಸ್ ಮೀಸಲಿಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಸ್ವಯಂ ಕ್ವಾರಂಟೈನ್
ಆಸ್ಪತ್ರೆಯಲ್ಲಿ ಕರೊನಾ ಚಿಕಿತ್ಸೆ ಕುರಿತು ಪರಿಶೀಲನೆ ನಡೆಸಿದ ಸಚಿವರು, ಸೋಂಕಿತರ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಚಿಕಿತ್ಸೆ ವೇಳೆ ಆಸ್ಪತ್ರೆಯ ಎಲ್ಲ ಸಿಬ್ಬಂದಿ ಕೂಡ ಸುರಕ್ಷತೆಯ ಕ್ರಮಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.