

ನವದೆಹಲಿ: ಕರೊನಾ ವೈರಸ್ ಸೋಂಕು ಇರುವ ಶಂಕೆಯಲ್ಲಿ ದೇಶದಾದ್ಯಂತ ಸಾವಿರಾರು ಜನರಿಗೆ 14 ದಿನಗಳ ಹೋಂಕ್ವಾರಂಟೈನ್ನಲ್ಲಿ ಇರುವಂತೆ ವೈದ್ಯರು ಸಲಹೆ ನೀಡುತ್ತಿದ್ದಾರೆ. ಹೋಂಕ್ವಾರಂಟೈನ್ನಲ್ಲಿರುವವರು ಬಳಸಿ, ಬಿಸಾಡಿದ ಬಯೋಮೆಡಿಕಲ್ ವೇಸ್ಟ್ ಅನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಬೇಕಾಗುತ್ತದೆ. ಇಲ್ಲವಾದಲ್ಲಿ, ಕರೊನಾ ವೈರಸ್ ಸೋಂಕು ಸಾಂಕ್ರಾಮಿಕವಾಗಿ ಹರಡುವ ಭೀತಿ ಎದುರಾಗಿದೆ.
ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ಪ್ರಕಾರ ಹೋಂಕ್ವಾರಂಟೈನ್ನಲ್ಲಿರುವವರು ಬಳಸಿದ ಮಾಸ್ಕ್ಗಳು, ಗ್ಲೌಸ್ಗಳನ್ನು ಬಯೋಮೆಡಿಕಲ್ ವೇಸ್ಟ್ ಎಂದು ವರ್ಗೀಕರಿಸಿದೆ. ಈ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ಸಾಮಾನ್ಯ ಬಯೋಮೆಡಿಕಲ್ ವೇಸ್ಟ್ ಸಂಸ್ಕರಣೆ ಮತ್ತು ವಿಲೇವಾರಿ ಸೌಲಭ್ಯಗಳಲ್ಲಿ (ಸಿಬಿಡಬ್ಲ್ಯುಟಿಎಫ್) ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕಾಗುತ್ತದೆ. ದುರದೃಷ್ಟವಶಾತ್, ಬಯೋಮೆಡಿಕಲ್ ವೇಸ್ಟ್ ಅನ್ನು ಸಾಮಾನ್ಯ ತ್ಯಾಜ್ಯದ ರೀತಿಯಲ್ಲಿ ಸದ್ಯ ನಿರ್ವಹಿಸಲಾಗುತ್ತಿದೆ. ಇದರಿಂದ ಮುಂದೆ ಭಾರಿ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಸಿಪಿಸಿಬಿ ಎಚ್ಚರಿಸಿದೆ.
ಹೋಂಕ್ವಾರಂಟೈನ್ನಲ್ಲಿರುವವರ ರಕ್ತ ಮತ್ತು ಗಂಟಲ ದ್ರವದ ಮಾದರಿಯ ಪರೀಕ್ಷೆಯ ಬಳಿಕ ಅವರಲ್ಲಿ ಕರೋನಾ ಸೋಂಕು ದೃಢಪಡುವುದರಿಂದ ಅಪಾಯ ಹೆಚ್ಚಾಗಲು ಕಾರಣ ಎಂದು ಅದು ಹೇಳಿದೆ.
ಸಂಗ್ರಹಣ ಮತ್ತು ವಿಲೇವಾರಿ ಹೇಗೆ? ಸಿಪಿಸಿಬಿಯ ಪ್ರಕಾರಣ ಹೋಂಕ್ವಾರಂಟೈನ್ನಲ್ಲಿರುವವರಿಂದ ಉತ್ಪತ್ತಿಯಾಗುವ ಬಯೋಮೆಡಿಕಲ್ ವೇಸ್ಟ್ ಅನ್ನು ಹಳದಿ ಬಣ್ಣದ ಬ್ಯಾಗ್ಗಳಲ್ಲಿ ಇರಿಸಿ ವಿಲೇವಾರಿ ಮಾಡಬೇಕಾಗುತ್ತದೆ. ಇದಕ್ಕಾಗಿ ಸ್ಥಳೀಯ ಆಡಳಿತ ಸಂಸ್ಥೆಗಳು ಪ್ರೊಟೆಕ್ಟಿವ್ ಗೇರ್ಗಳನ್ನು ಹಾಕಿಕೊಂಡಿರುವ ತರಬೇತಿ ಪಡೆದ ಸಿಬ್ಬಂದಿಯ ಮೂಲಕ ಈ ತ್ಯಾಜ್ಯವನ್ನು ಸಂಗ್ರಹಿಸಬೇಕು. ಹಾಗೆ ತ್ಯಾಜ್ಯ ಸಂಗ್ರಹಿಸಿದ ಮನೆಯ ವಿವರಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕಿದೆ. ಬಳಿಕ ಅದನ್ನು ಸಿಬಿಡಬ್ಲ್ಯುಟಿಎಫ್ ಮೂಲಕ ಅದನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬೆಂಗಳೂರು ನಗರದಲ್ಲಿ ಬಯೋಮೆಡಿಕಲ್ ವೇಸ್ಟ್ ಸಂಗ್ರಹಣೆ ಮತ್ತು ವಿಲೇವಾರಿ ಹೊಣೆಗಾರಿಕೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಿದೆ. ಎರಡು ವಲಯಕ್ಕೆ ಒಂದರಂತೆ ಒಟ್ಟು 8 ವಲಯಗಳಲ್ಲಿನ ಬಯೋಮೆಡಿಕಲ್ ತ್ಯಾಜ್ಯ ಸಂಗ್ರಹಣೆ ಹೊಣೆಗಾರಿಕೆಯನ್ನು ನಾಲ್ಕು ಸಂಸ್ಥೆಗಳಿಗೆ ಕೊಡಲಾಗಿದೆ.