

ಮುಂಬೈ: ಸಾಕಷ್ಟು ರಾಜಕೀಯ ಜಟಾಪಟಿಯ ಬಳಿಕ ಮಹಾರಾಷ್ಟ್ರದ ಸಿಎಂ ಗಾದಿಯನ್ನು ಒಲಿಸಿಕೊಂಡಿರುವ ಉದ್ಧವ್ ಠಾಕ್ರೆ ಅವರ ಮನೆ ಬಾಗಿಲಿಗೇ ಕೋವಿಡ್ 19 ಬಂದಿದೆ. ಈ ಹಿನ್ನೆಲೆಯಲ್ಲಿ ಅವರ ಮನೆ ಮಾತೋಶ್ರೀ ಸುತ್ತಮುತ್ತಲಿನ ಪ್ರದೇಶದಲ್ಲಿ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಮತ್ತು ಮುಂಬೈ ಪೊಲೀಸರು ಜನಸಂಚಾರವನ್ನು ಸಂಪೂರ್ಣ ನಿರ್ಬಂಧಿಸಿದ್ದಾರೆ.
ಮಾತೋಶ್ರೀ ಎದುರಿಗೆ ಇದ್ದ ಚಹಾ ಅಂಗಡಿಯಲ್ಲಿ ಸಿಎಂ ಮನೆಯ ಸಿಬ್ಬಂದಿ ಅಲ್ಲದೆ ಅವರ ಬೆಂಗಾವಲು ಪಡೆ ಸಿಬ್ಬಂದಿ ಎಲ್ಲರೂ ಚಹಾ ಕುಡಿಯುತ್ತಿದ್ದರು. ಇದೀಗ ಆ ಅಂಗಡಿಯ ಮಾಲೀಕನಿಗೇ ಕರೊನಾ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಆ ಪ್ರದೇಶವನ್ನು ನಿರ್ಬಂಧಿತ ಪ್ರದೇಶ ಎಂದು ಘೋಷಿಸಲಾಗಿದೆ.
ಚಹಾ ಅಂಗಡಿಯ ಮಾಲಿಕ ಕಳೆದ ನಾಲ್ಕು ದಿನಗಳಿಂದ ಕೆಮ್ಮು, ಶೀತ ಮತ್ತು ಜ್ವರದಿಂದ ಬಳಲುತ್ತಿದ್ದು, ಕರೊನಾ ಸೋಂಕಿನ ಕುರುಹು ತೋರಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ಜೋಗೇಶ್ವರಿಯಲ್ಲಿರುವ ಹೃದಯ ಸಾಮ್ರಾಟ್ ಬಾಳಾ ಸಾಹೇಬ್ ಠಾಕ್ರೆ ಟ್ರೌಮಾ ಕೇರ್ ಮುನ್ಸಿಪಲ್ ಹಾಸ್ಪಿಟಲ್ಗೆ ದಾಖಲಿಸಲಾಗಿತ್ತು. ಆತನ ಗಂಟಲ ದ್ರವ ಮತ್ತು ರಕ್ತ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಆತನಿಗೆ ನೋವೆಲ್ ಕರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದ್ದರಿಂದ ಈ ಪ್ರದೇಶದಲ್ಲಿ ಜನ ಮತ್ತು ವಾಹನ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.