

ಬೆಂಗಳೂರು: ನಮ್ಮ ಕುಟುಂಬದ ಭೂ ಕಬಳಿಕೆಯನ್ನು ಅವರೇನು ಬಿಚ್ಚಿಡುತ್ತಾರೆ. ಅವರೇ ಬೆತ್ತಲಾಗಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು.
ಜೆ.ಪಿ.ನಗರದ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲಕ್ಕೂ ಉತ್ತರ ಕೋಡೋಣ. ಅಲ್ಲಿ ಯಾರು ಪ್ರಶ್ನೆ ಮಾಡುತ್ತಿದ್ದಾರೆ ಅವರಿಗೆ ನೈತಿಕತೆ ಇದೆಯಾ?
ನನ್ನನ್ನು ಬೆಳೆಸಿದ ಜನರ ಮುಂದೆ ಉತ್ತರ ಕೊಡೋಣ. ರಾಮನಗರ, ಬಿಡದಿ, ಚನ್ನಪಟ್ಟಣದಲ್ಲಿ ಆರೋಪಗಳಿಗೆಲ್ಲ ಉತ್ತರ ಕೊಡೋಣ ಎಂದು ಮಾರ್ಮಿಕವಾಗಿ ಹೇಳಿದರು.
ಪರಿಶಿಷ್ಟರ ದುಡ್ಡು ಲೂಟಿ ಹೊಡೆದಿದ್ದಾರೆ, ಮುಡಾದಲ್ಲಿ ಅವ್ಯವಹಾರ ಮಾಡಿದ್ದಾರೆ, ವರ್ಗಾವಣೆಯಲ್ಲಿ ದಂಧೆ ಮಾಡುತ್ತಿದ್ದಾರೆ, ಅಹಿಂದ ಹೆಸರು ಹೇಳಿಕೊಂಡು ಮಾಡಿದ ತಪ್ಪು ಮುಚ್ಚಿಹಾಕಿಕೊಳ್ಳಲು ನೋಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ ನಡೆಸಿದರು.
ವೈದ್ಯರು ದೇಹದ ಮೇಲೆ ಒತ್ತಡ ಹಾಕಬಾರದು ಎಂದು ಹೇಳಿದ್ದಾರೆ. ಕಾರ್ಯಕರ್ತರಿಗೆ ಹುಮ್ಮಸ್ಸು ಕೋಡಬೇಕಿದೆ. ಪಾದಯಾತ್ರೆ ಮಾಡುವ ಬಗ್ಗೆ ಬಳಿಕ ತೀರ್ಮಾನ ಮಾಡುತ್ತೇನೆ ಎಂದರು.
ಹೊಟ್ಟೆ ಉರಿಗೆ ಔಷಧ ತೆಗೆದುಕೊಳ್ಳಬಹುದು. ಆದರೆ, ರಾಜಕೀಯ ಹೊಟ್ಟೆ ಉರಿಗೆ ಔಷಧ ಇಲ್ಲ ಎಂದು ವ್ಯಂಗ್ಯವಾಡಿದರು.
ಎಸ್ಸಿ,ಎಸ್ಟಿ ಜನರಿಗೆ ಕಲ್ಯಾಣಕ್ಕೆ ಮೀಸಲಿಟ್ಟ ಹಣವನ್ನು ಲೂಟಿ ಹೊಡೆದ್ದಾರೆ. ಇವರು ಅಹಿಂದ ರಕ್ಷಕರಾ? ಹೊಟ್ಟೆ ಉರಿ ಪಡೆಯಬೇಕಾದವರು ಅಹಿಂದ ವರ್ಗ. ಕೆಟ್ಟ ರೀತಿಯ ಸರ್ಕಾರದ ವಿರುದ್ಧ ಜನರ ಆಕ್ರೋಶವಿದೆ. ಅದಕ್ಕೆ ಈ ಪಾದಯಾತ್ರೆ ಎಂದರು.
ಅವರಿಗೆ ಬೇಕಾದಾಗ ರಾಜ್ಯಪಾಲರು ಒಳ್ಳೆಯವರು: ರಾಜ್ಯಪಾಲರ ಮೂಲಕ ರಾಜ್ಯ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಇಂತಹ ಪರಿಸ್ಥಿತಿಯಲ್ಲಿ ಇದನ್ನೆ ಹೇಳಬೇಕು ತಾನೆ? ಎಲ್ಲರೂ ಹೇಳೋದು ಇದನ್ನೆ ತಾನೆ? ಅವರಿಗೆ ಬೇಕಾದಾಗ ರಾಜ್ಯಪಾಲರು ಒಳ್ಳೆಯವರು ಬೇಡವಾದಾಗ ಕೆಟ್ಟವರು. ಅವರ ತಪ್ಪನ್ನು ಮುಚ್ಚಿಕೊಳ್ಳಲು ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.
ಯಾದಗಿರಿ ಪಿಎಸ್‌ಐ ವರ್ಗಾವಣೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ವರ್ಗಾವಣೆಗಳಲ್ಲಿ ಪ್ರತಿಯೊಂದು ಸ್ಥಳಕ್ಕೂ ಹಣ ಕೊಡಬೇಕು. ಸಾವಿರಾರು ಉದಾಹರಣೆ ಕೊಡಬಲ್ಲೆ ಸಿಎಂ ವಿರುದ್ಧ ಕುಮಾರಸ್ವಾಮಿ ಹರಿಹಾಯ್ದರು.