

ನವದೆಹಲಿ: ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳಿಗೆ ಶೀಘ್ರವೇ ಭಾರತದ ಔಷಧ ನಿಯಂತ್ರಕರಿಂದ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಅನುಮೋದನೆ ದೊರಕುವ ನಿರೀಕ್ಷೆಯಿದ್ದು ಈ ಎರಡೂ ಲಸಿಕೆಗಳ ಪ್ರತಿ ಡೋಸ್ಗೆ 275 ರೂಪಾಯಿ ದರ ನಿಗದಿಪಡಿಸುವ ಸಂಭವವಿದೆ. ಜತೆಗೆ 150 ರೂಪಾಯಿ ಹೆಚ್ಚುವರಿ ಸೇವಾ ಶುಲ್ಕ ವಿಧಿಸಲಾಗುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ವ್ಯಾಕ್ಸಿನ್ಗಳು ಜನರ ಕೈಗೆಟಕುವ ಬೆಲೆಯಲ್ಲಿ ದೊರಕುವಂತಾಗಲು ಅವುಗಳ ಬೆಲೆ ನಿಗದಿ ಪ್ರಕ್ರಿಯೆ ಆರಂಭಿಸುವಂತೆ ರಾಷ್ಟ್ರೀಯ ಔಷಧಿ ದರ ಪ್ರಾಧಿಕಾರಕ್ಕೆ (ಎನ್ಪಿಪಿಎ) ನಿರ್ದೇಶನ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಸ್ತುತ, ಖಾಸಗಿ ಆಸ್ಪತ್ರೆಗಳಲ್ಲಿ ಕೊವ್ಯಾಕ್ಸಿನ್ ಬೆಲೆ ಪ್ರತಿ ಡೋಸ್ಗೆ 1,200 ರೂಪಾಯಿ ಹಾಗೂ ಕೋವಿಶೀಲ್ಡ್ ಬೆಲೆ 780 ರೂಪಾಯಿ ಆಗಿದೆ. ಎರಡರಲ್ಲೂ 150 ರೂಪಾಯಿ ಸೇವಾ ಶುಲ್ಕ ಒಳಗೊಂಡಿದೆ. ದೇಶದಲ್ಲಿ ತುರ್ತು ಬಳಕೆಗೆ ಈ ಎರಡು ಲಸಿಕೆಗಳಿಗೆ ಮಾತ್ರ ಅನುಮೋದನೆ ನೀಡಲಾಗಿದೆ. ಕೋವಿಡ್ ಲಸಿಕೆಗಳಾದ ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ಗಳಿಗೆ ಮಾರುಕಟ್ಟೆ ಅನುಮತಿ ನೀಡಬಹುದೆಂದು ಕೇಂದ್ರೀಯ ಔಷಧ ಮಾನಕ ನಿಯಂತ್ರಣ ಸಂಸ್ಥೆಯ (ಸಿಡಿಎಸ್ಸಿಒ) ವಿಷಯ ತಜ್ಞರ ಸಮಿತಿ ಜನವರಿ 19ರಂದು ಶಿಫಾರಸು ಮಾಡಿದೆ.
163 ಕೋಟಿ ಡೋಸ್ ಲಸಿಕೆ: ಭಾರತದಲ್ಲಿ ಮಂಗಳವಾರದವರೆಗೆ 163.49 ಕೋಟಿ ಡೋಸ್ಗೂ ಅಧಿಕ ಕೋವಿಡ್ ತಡೆ ವ್ಯಾಕ್ಸಿನ್ ನೀಡ ಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, ಅನ್ಯವ್ಯಾಧಿಯುಳ್ಳ 60 ವರ್ಷ ಮೇಲ್ಪಟ್ಟವರಿಗೆ 93 ಲಕ್ಷಕ್ಕೂ ಹೆಚ್ಚು ಮುನ್ನೆಚ್ಚರಿಕೆ ಡೋಸ್ ಹಾಕಲಾಗಿದೆ.
ವಾರದಲ್ಲಿ 2 ಕೋಟಿ ಕೇಸ್
ಜಗತ್ತಿನಲ್ಲಿ ಕಳೆದ ವಾರ ಕರೊನಾ ಸೋಂಕಿನ 2.1 ಕೋಟಿಗೂ ಹೆಚ್ಚಿನ ಹೊಸ ಪ್ರಕರಣಗಳು ದೃಢಪಟ್ಟಿವೆ. ಇದು 2019ರ ಕೊನೆಯಲ್ಲಿ ಸಾಂಕ್ರಾಮಿಕತೆ ಆರಂಭವಾದಾಗಿ ನಿಂದ ದಾಖಲಾದ ಅತ್ಯಧಿಕ ಸಾಪ್ತಾಹಿಕ ಕೇಸ್ ಆಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ತಿಳಿಸಿದೆ. ಒಮಿಕ್ರಾನ್ ಪ್ರಭೇದ ಜಗತ್ತಿನಾದ್ಯಂತ ಹೆಚ್ಚು ಪ್ರಮುಖ ರೂಪಾಂತರಿಯಾಗುತ್ತಿದೆ. ಒಮಿಕ್ರಾನ್ನಿಂದಾಗಿಯೇ ಸೋಂಕಿನ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ ಎಂದು ಹೇಳಿದೆ. ಕಳೆದ ವಾರ ಸುಮಾರು 50,000 ಜನರು ಸೋಂಕಿಗೆ ಬಲಿಯಾಗಿದ್ದಾರೆ ಎಂದೂ ಸಾಪ್ತಾಹಿಕ ಸಾಂಕ್ರಾಮಿಕತೆ ಅಪ್ಡೇಟ್ ವರದಿ ತಿಳಿಸಿದೆ. ಜನವರಿ 23ರ ವರೆಗೆ ವಿಶ್ವದಲ್ಲಿ ಒಟ್ಟು 34.6 ಕೋಟಿಗೂ ಹೆಚ್ಚು ಜನರು ಕೋವಿಡ್ ಪೀಡಿತರಾಗಿದ್ದಾರೆ. ಸುಮಾರು 55 ಲಕ್ಷ ಮಂದಿ ಮೃತಪಟ್ಟಿದ್ದಾರೆ.
ಭಾರತದಲ್ಲಿ 4 ಕೋಟಿ ದಾಟಿದ ಸೋಂಕಿತರು
ಭಾರತದಲ್ಲಿ ಬುಧವಾರ 2,85,914 ಜನರು ಹೊಸದಾಗಿ ಕರೊನಾ ಸೋಂಕಿತರಾಗಿದ್ದು, ವ್ಯಾಧಿಪೀಡಿತರ ಒಟ್ಟು ಸಂಖ್ಯೆ ನಾಲ್ಕು ಕೋಟಿ ದಾಟಿದೆ. ದೇಶದ ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 4,00,85,116 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. 665 ಜನರು ಮೃತಪಡುವುದರೊಂದಿಗೆ ಸಾವಿನ ಒಟ್ಟು ಸಂಖ್ಯೆ 4,91,127ಕ್ಕೆ ತಲುಪಿದೆ. ದೇಶದಲ್ಲಿ ಸಕ್ರಿಯ ಕೇಸ್ ಸಂಖ್ಯೆ 22,23,018ಕ್ಕೆ ಇಳಿದಿದೆ. ಇದು ಒಟ್ಟು ಪ್ರಕರಣಗಳ ಶೇಕಡ 5.55 ಆಗಿದೆ. ರಾಷ್ಟ್ರೀಯ ಚೇತರಿಕೆ ದರ 93.23ಕ್ಕೆ ಕುಸಿದಿದೆ.
ರಾಜ್ಯಗಳಿಗೆ ಮಾಂಡವೀಯ ಸೂಚನೆ
ಲಸಿಕೆ ಪಡೆಯದವರು ಕರೊನಾ ಕಾರಣಕ್ಕಾಗಿ ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಹೆಚ್ಚಾಗಿರುವುದರಿಂದ ಲಸಿಕೆ ನೀಡಿಕೆಗೆ ಆದ್ಯತೆ ನೀಡಬೇಕೆಂದು ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಸೂಚಿಸಿದ್ದಾರೆ. ಮಂಗಳವಾರ ಒಂಬತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾಂಡವೀಯ ಈ ಸೂಚನೆ ನೀಡಿದ್ದಾರೆ.
ಹೆಚ್ಚು ಕಾಲ ಜೀವಂತ
ಇತರ ರೂಪಾಂತರಿಗಳಿಗೆ ಹೋಲಿಸಿದರೆ ಒಮಿಕ್ರಾನ್ ಪ್ರಭೇದವು ಪ್ಲಾಸ್ಟಿಕ್ ಮತ್ತು ಚರ್ಮದ ಮೇಲೆ ಹೆಚ್ಚು ಕಾಲ ಜೀವಂತ ವಾಗಿರುತ್ತದೆ ಎಂದು ಅಧ್ಯಯನವೊಂದು ಹೇಳಿದೆ. ಜಪಾನ್ನ ಕ್ಯೋಟೊ ಪ್ರಿಫೆಕ್ಚುರಲ್ ಯುನಿವರ್ಸಿಟಿ ಆಫ್ ಮೆಡಿಸಿನ್ ಸಂಸ್ಥೆಯ ಸಂಶೋಧಕರು ಈ ಅಧ್ಯಯನ ನಡೆಸಿದ್ದರು.