

*ಮಕ್ಕಳ ಮೇಲೆ ಕೊವ್ಯಾಕ್ಸಿನ್ ಟ್ರಯಲ್* ತಜ್ಞರ ಸಮಿತಿ ಶಿಫಾರಸು
, ವಿವಿಧೆಡೆ 525 ಮಂದಿ ಮೇಲೆ ಪರೀಕ್ಷೆ
ನವದೆಹಲಿ: ಕರೊನಾ ಎರಡನೇ ಅಲೆಯಲ್ಲಿ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪೀಡಿತರಾಗುತ್ತಿದ್ದು, ಮೂರನೇ ಅಲೆ ಮಕ್ಕಳಿಗೆ ಅಪಾಯಕಾರಿ ಆಗಬಲ್ಲದು ಎಂಬ ತಜ್ಞರ ಅಭಿಪ್ರಾಯಗಳ ಬೆನ್ನಲ್ಲೇ, ಈಗ ಕೊವ್ಯಾಕ್ಸಿನ್ ಲಸಿಕೆಯನ್ನು 18 ವರ್ಷಕ್ಕಿಂತ ಚಿಕ್ಕವರ ಮೇಲೆ ಕ್ಲಿನಿಕಲ್ ಟ್ರಯಲ್ ನಡೆಸಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಬುಧವಾರ ಒಪ್ಪಿಗೆ ನೀಡಿದೆ. 2 ರಿಂದ 18 ವರ್ಷದವರ ಮೇಲೆ ಪ್ರಾಯೋಗಿಕ ಪರೀಕ್ಷೆ ನಡೆಸಲು ತಜ್ಞರ ಸಮಿತಿ ಶಿಫಾರಸು ಮಾಡಿದೆ. ದೇಶದಲ್ಲಿ ಮಕ್ಕಳ ಮೇಲೆ ಕರೊನಾ ಲಸಿಕೆ ಕ್ಲಿನಿಕಲ್ ಟ್ರಯಲ್ ನಡೆಯುತ್ತಿರುವುದು ಇದೇ ಮೊದಲ ಬಾರಿ. ಲಸಿಕೆಯ ಎರಡನೇ ಹಾಗೂ ಮೂರನೇ ಹಂತದ ಪ್ರಯೋಗವನ್ನು ಮಕ್ಕಳ ಮೇಲೆ ನಡೆಸಲು ಷರತ್ತುಬದ್ಧ ಒಪ್ಪಿಗೆ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೇಗೆ ನಡೆಯಲಿದೆ?: ನವದೆಹಲಿಯ ಏಮ್್ಸ ಸಹಿತ ದೇಶದ ವಿವಿಧ ಭಾಗಗಳಲ್ಲಿ ಪ್ರಯೋಗ ನಡೆಯಲಿದೆ. ಒಟ್ಟು 525 ಮಂದಿ ಮೇಲೆ ಟ್ರಯಲ್ ನಡೆಯಲಿದೆ. ಈ ಲಸಿಕೆ ಮಕ್ಕಳಿಗೆ ಸುರಕ್ಷಿತವಾಗಿದೆಯೇ? ಪ್ರತಿಕಾಯಗಳು ಅಗತ್ಯ ಪ್ರಮಾಣದಲ್ಲಿ ಉತ್ಪತ್ತಿ ಆಗುತ್ತವೆಯೇ? ಮಕ್ಕಳ ದೇಹ ಲಸಿಕೆಗೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತದೆ? ಇನ್ನಿತರ ಅಂಶಗಳನ್ನು ಪ್ರಯೋಗದ ವೇಳೆ ಖಚಿತಪಡಿಸಿಕೊಳ್ಳಲಾಗುತ್ತದೆ. ಯಾವುದೇ ಅಡ್ಡ ಪರಿಣಾಮ ಇಲ್ಲ ಎಂಬುದು ಖಾತ್ರಿಯಾದ ಬಳಿಕವೇ ತುರ್ತು ಬಳಕೆಗೆ ಅನುಮೋದನೆ ನೀಡಲಾಗುತ್ತದೆ.
ಯಾವಾಗ ಲಭ್ಯ?: ಈ ಲಸಿಕೆ ಯಾವಾಗ ಸಾರ್ವಜನಿಕವಾಗಿ ಬಳಕೆಗೆ ಸಿಗುತ್ತದೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಕೆಲ ತಿಂಗಳ ಕಾಲ ಕ್ಲಿನಿಕಲ್ ಟ್ರಯಲ್ ನಡೆಲಾಗುತ್ತದೆ. ಫಲಿತಾಂಶದ ಮೇಲೆ ಮುಂದಿನ ಹಂತ ನಿರ್ಧಾರವಾಗುತ್ತದೆ. ಅಲ್ಪ ಪ್ರಮಾಣದಲ್ಲಿ ಲೋಪ ಕಂಡುಬಂದರೂ, ಅದನ್ನು ಸರಿಪಡಿಸಿ ಮತ್ತೆ ಟ್ರಯಲ್ ಕೈಗೊಂಡ ಬಳಿಕ ಅಂತಿಮ ಹಂತದ ಅನುಮೋದನೆ ಸಿಗಲಿದೆ. ಹೀಗಾಗಿ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ಸಿಗಲು ಇನ್ನು ಕೆಲ ತಿಂಗಳು ಕಾಯಬೇಕಿದೆ.
ಯಾಕೆ ಮಹತ್ವ?: ದೇಶದಲ್ಲಿ ಈಗ ಲಸಿಕೆ ಅಭಿಯಾನ ಚುರುಕಿನಿಂದ ನಡೆಯುತ್ತಿದೆ. ಮೊದಲು ಕರೊನಾ ವಾರಿಯರ್ಸ್, ಹಿರಿಯ ನಾಗರಿಕರು, ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರಿಗೆ ಆದ್ಯತೆ ಮೇಲೆ ಲಸಿಕೆ ನೀಡಲಾಗಿದೆ. ಈಗ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಆದರೆ ಮಕ್ಕಳು ಹಾಗೂ 18 ವರ್ಷಕ್ಕಿಂತ ಕಡಿಮೆ ವಯೋಮಿತಿ ಇರುವವರಿಗೆ ಇನ್ನೂ ಲಸಿಕೆ ಸಿಕ್ಕಿಲ್ಲ. ದೇಶದಲ್ಲಿ ಮೂರನೇ ಅಲೆ ಎದುರಾದರೆ 18 ವರ್ಷಕ್ಕಿಂತ ಮೇಲ್ಪಟ್ಟ ಬಹುತೇಕರು ಲಸಿಕೆ ಪಡೆದು ಕೆಲ ಮಟ್ಟಿಗೆ ಸುರಕ್ಷಿತವಾಗಿರುತ್ತಾರೆ. ಆದರೆ ಮಕ್ಕಳಿಗೆ ಇನ್ನೂ ಲಸಿಕೆ ಸಿಕ್ಕಿಲ್ಲ. ಹೀಗಾಗಿ 18 ವರ್ಷಕ್ಕಿಂತ ಕೆಳಗಿನವರಿಗೆ ಲಸಿಕೆ ನೀಡಿಕೆ ಮಹತ್ವದ್ದಾಗಿದೆ.
ಬೆಂಗಳೂರಲ್ಲಿ ನೂತನ ಘಟಕ: ಕೊವ್ಯಾಕ್ಸಿನ್ ಉತ್ಪಾದನೆ ಮಾಡುತ್ತಿರುವ ಭಾರತ್ ಬಯೋಟೆಕ್ನ ಬೆಂಗಳೂರಿನ ನೂತನ ಘಟಕಕ್ಕೆ ಕೇಂದ್ರ ಸರ್ಕಾರ 65 ಕೋಟಿ ರೂ. ನೆರವು ನೀಡಿದೆ. ಇಲ್ಲಿ ಉತ್ಪಾದನೆ ಆರಂಭವಾದರೆ ಲಸಿಕೆ ಕೊರತೆ ತುಸು ನಿವಾರಣೆ ಆಗಲಿದೆ.
ಪೋಲಿಯೋ ಲಸಿಕೆ ಉತ್ಪಾದಕರಿಂದ ಕೊವ್ಯಾಕ್ಸಿನ್
ದೇಶಾದ್ಯಂತ ಉಂಟಾಗಿರುವ ಲಸಿಕೆ ಕೊರತೆಯನ್ನು ನೀಗಿಸಲು ಸರ್ಕಾರ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಪೋಲಿಯೋ ಲಸಿಕೆ ತಯಾರಿಸುವ ಬಿಐಬಿಸಿಒಎಲ್ ಕಂಪನಿಯ ಉತ್ತರ ಪ್ರದೇಶ ಘಟಕದಲ್ಲಿ ಪ್ರತಿ ತಿಂಗಳು ಎರಡು ಕೋಟಿ ಕೋವ್ಯಾಕ್ಸಿನ್ ಲಸಿಕೆ ಉತ್ಪಾದನೆ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಬಿಐಬಿಸಿಒಎಲ್ ಸರ್ಕಾರಿ ಸ್ವಾಮ್ಯದ ಕಂಪನಿಯಾಗಿದ್ದು, ಉತ್ತರ ಪ್ರದೇಶದ ಬುಲಂದಶಹರದಲ್ಲಿ ಉತ್ಪಾದನೆ ಘಟಕ ಹೊಂದಿದೆ. ಕೊವ್ಯಾಕ್ಸಿನ್ ಉತ್ಪಾದನೆ ಮಾಡುತ್ತಿರುವ ಭಾರತ್ ಬಯೋಟೆಕ್ ಜತೆ ಈಗಾಗಲೇ ಒಪ್ಪಂದ ಏರ್ಪಟ್ಟಿದೆ. ಇದಕ್ಕೆ ಕೇಂದ್ರ ಸರ್ಕಾರ 30 ಕೋಟಿ ರೂ. ನೆರವು ನೀಡಲಿದೆ. ಪ್ರಸ್ತುತ ಬಿಐಬಿಸಿಒಎಲ್ ಕಂಪನಿ ವಾರ್ಷಿಕ 6 ಕೋಟಿ ಪೋಲಿಯೋ ಲಸಿಕೆ ಸಹಿತ ಹಲವು ಔಷಧಗಳನ್ನು ಉತ್ಪಾದನೆ ಮಾಡುತ್ತಿದೆ.