ಮುನಿರತ್ನ ಜಾಮೀನು ತೀರ್ಪು ಕಾಯ್ದಿರಿಸಿದ ಕೋರ್ಟ್

munirathna-640x381
Published on

ಬೆಂಗಳೂರು: ಬಿಬಿಎಂಪಿ ಮಾಜಿ ಸದಸ್ಯನಿಗೆ ಕಿರುಕುಳ, ಜಾತಿ ನಿಂದನೆ ಮಾಡಿದ ಆರೋಪ ಪ್ರಕರಣದಲ್ಲಿ ಜೈಲು ಪಾಲಾಗಿರುವ ಶಾಸಕ ಮುನಿರತ್ನ ಅವರ ಜಾಮೀನು ಅರ್ಜಿ ಆದೇಶವನ್ನು ಕೋರ್ಟ್ ಕಾಯ್ದಿರಿಸಿದೆ.

ಬುಧವಾರ ನ್ಯಾಯಾಮೂರ್ತಿ ಸಂತೋಷ್ ಗಜಾನನ ಭಟ್ ಅವರು ಮುನಿರತ್ನ ಜಾಮೀನು ಅರ್ಜಿ ವಿಚಾರಣೆಯನ್ನು ನಡೆಸಿದರು. ವಾದ-ಪ್ರತಿವಾದ ಆಲಿಸಿದ ಮೇಲೆ ಗುರುವಾರಕ್ಕೆ ತೀರ್ಪು ಕಾಯ್ದಿರಿಸಿದರು.

ದೂರುದಾರ ವೇಲು ನಾಯ್ಕರ್ ಪರ ಸೂರ್ಯಮುಕುಂದರಾಜ್ ವಾದ ಮಂಡಿಸಿದ್ದರು. ಜಾಮೀನು ನೀಡಿದರೆ ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇದೆ. ಶಾಸಕರ ಕಚೇರಿಯಲ್ಲಿ ಘಟನೆ ಆಗಿರುವುದರಿಂದ ಜಾಮೀನು ನೀಡಬಾರದು ಎಂದು ವಾದ ಮಂಡಿಸಿದರು.

ಮುನಿರತ್ನ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ವಾದ ಮಂಡಿಸಿದ್ದು, 2015 ರಿಂದ 2020 ರವರೆಗೆ ದೂರುದಾರ ಪಾಲಿಕೆ ಸದಸ್ಯರಾಗಿದ್ದರು. ನಂತರ ಭಿನ್ನಾಭಿಪ್ರಾಯ ಬಂದಿತ್ತೆಂದು ದೂರಿನಲ್ಲಿ ಹೇಳಲಾಗಿದೆ. 2015 ರಿಂದ ಯಾವಾಗ ನಿಂದಿಸಿದ್ದರೆಂದು ಹೇಳಿಲ್ಲ 3 (1) ಸೆಕ್ಷನ್ ಅನ್ವಯಿಸುವುದಿಲ್ಲ ಎಂದು ಎಸ್‌ಪಿಪಿ ಒಪ್ಪಿಕೊಂಡಿದ್ದಾರೆ. 41ಎ ಅಡಿ ನೋಟಿಸ್ ನೀಡಬೇಕಿತ್ತು. ಹೀಗಾಗಿ ಜಾಮೀನು ನೀಡುವಂತೆ ಮನವಿ ಮಾಡಿದರು.

ಬಿಬಿಎಂಪಿ ಗುತ್ತಿಗೆದಾರ ವೇಲು ನಾಯ್ಕರ್‌ಗೆ ಕಿರುಕುಳ, ಜಾತಿ ನಿಂದನೆ ಮತ್ತು ಮಹಿಳೆ ಗೌರವಕ್ಕೆ ಧಕ್ಕೆ ತಂದ ಆರೋಪದ ಮೇಲೆ ಬೆಂಗಳೂರಿನಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು. ನಂತರ ಕೋಲಾರದಲ್ಲಿ ಮುನಿರತ್ನ ಅವರನ್ನು ಸೆ.14ರಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಪೊಲೀಸರು ಒಪ್ಪಿಸಿದ್ದಾರೆ. ಮೊದಲ ಎಫ್‌ಐಆರ್‌ನಲ್ಲಿ ಮುನಿರತ್ನ ವಿರುದ್ಧ ಬೆದರಿಕೆ, ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ, ಸುಲಿಗೆ ಮಾಡಲು ವ್ಯಕ್ತಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net