

ಬೆಂಗಳೂರು: ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ರದ್ದು ಪಡಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶಕ್ಕೆ ವಿಭಾಗೀಯ ಪೀಠ ತಡೆಯಾಜ್ಞೆ ನೀಡಿದೆ. ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಅಧಿಸೂಚನೆ ರದ್ದುಪಡಿಸಿ ನ.19ರಂದು ಏಕಸದಸ್ಯ ಪೀಠ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ನೇತೃತ್ವದ ವಿಭಾಗೀಯ ಪೀಠ, ಸರ್ಕಾರದ ವಾದ ಆಲಿಸಿ ಮೇಲ್ಮನವಿಯಲ್ಲಿನ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸಲು ಸೂಚಿಸಿತು.
ಅರ್ಜಿಯಲ್ಲಿನ ಕೆಲ ತಾಂತ್ರಿಕ ಲೋಪ ಸರಿಪಡಿಸಲು ಕಾಲಾವಕಾಶ ನೀಡುವಂತೆ ಸರ್ಕಾರದ ಪರ ವಕೀಲರು ಮಾಡಿದ ಮನವಿ ಪರಿಗಣಿಸಿ ಅರ್ಜಿ ವಿಚಾರಣೆ ಮುಂದೂಡಿತು. ಹಾಸನ, ಆರಸಿಕೇರೆ, ಹರಿಹರ, ಕೊಪ್ಪಳ ಹಾಗೂ ಶಿಡ್ಲಘಟ್ಟ ನಗರಸಭೆಗಳು ಮತ್ತು ಚನ್ನಗಿರಿ, ಕೆ.ಆರ್. ಪೇಟೆ ಪುರಸಭೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸಬೇಕು. ಆದರೆ, ಚುನಾವಣಾ ಫಲಿತಾಂಶ ಘೊಷಿಸಬಾರದು ಎಂದು ಸುಪ್ರೀಂಕೋರ್ಟ್ ನೀಡಿರುವ ಆದೇಶ ಮುಂದುವರಿಯಲಿದೆ ಎಂದು ಇದೇ ವೇಳೆ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಸರ್ಕಾರದ ವಾದವೇನು?: ಚುನಾವಣೆ ನಡೆದು 2 ವರ್ಷಗಳಾಗುತ್ತ ಬಂದಿದ್ದರೂ, ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಆಡಳಿತ ವ್ಯವಸ್ಥೆ ಇಲ್ಲದಂತಾಗಿದೆ. ಈಗಾಗಲೇ ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾದವರು ಅಧಿಕಾರ ವಹಿಸಿಕೊಂಡಿದ್ದಾರೆ. 276 ಸ್ಥಳೀಯ ಸಂಸ್ಥೆಗಳ ಪೈಕಿ 5-6 ಸಂಸ್ಥೆಗಳಷ್ಟೇ ಮೀಸಲಾತಿ ಪ್ರಶ್ನೆ ಮಾಡಿವೆ. ಕೆಲವು ಸಂಸ್ಥೆಗಳ ಸಲುವಾಗಿ ಎಲ್ಲ ಸಂಸ್ಥೆಗಳ ಮೀಸಲಾತಿ ಅಧಿಸೂಚನೆ ರದ್ದುಪಡಿಸುವುದು ಸರಿಯಲ್ಲ.