ರಿಯಲ್ ಎಸ್ಟೇಟ್ ಹಗರಣಕ್ಕೆ ಬೆಂಬಲ ನೀಡಿದ ಆರೋಪ; ಮಹೇಶ್ ಬಾಬುಗೆ ಕೋರ್ಟ್ ನೋಟಿಸ್| Mahesh Babu

Mahesh Babu
Published on

Mahesh Babu | ನಟ ಮಹೇಶ್ ಬಾಬು ಅವರು ಹಿಂದೆ ಅನುಮೋದಿಸಿದ್ದ ರಿಯಲ್ ಎಸ್ಟೇಟ್ ಕಂಪನಿಯಿಂದಾಗಿ ಮತ್ತೆ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲಾ ಗ್ರಾಹಕ ಆಯೋಗವು ಟಾಲಿವುಡ್ ನಟನಿಗೆ ರಿಯಲ್ ಎಸ್ಟೇಟ್ ಸಂಸ್ಥೆಗೆ ಅನುಮೋದನೆ ನೀಡಿದ್ದಕ್ಕಾಗಿ ನೋಟಿಸ್ ಜಾರಿ ಮಾಡಿದೆ.

ಸಾಯಿ ಸೂರ್ಯ ಡೆವಲಪರ್ಸ್ ಕಂಪನಿಯು ನಡೆಸಿದ ಅಕ್ರಮದ ಆರೋಪಕ್ಕೆ ಈ ಲೀಗಲ್​ ನೋಟಿಸ್​ ನೀಡಲಾಗಿದೆ. ಮಹೇಶ್ ಬಾಬು ಈ ಸಂಸ್ಥೆಯ ಬ್ರಾಂಡ್ ಅಂಬಾಸಿಡ‌ರ್ ಆಗಿದ್ದರಿಂದ ಅವರಿಗೆ ನೋಟಿಸ್ ಕಳುಹಿಸಲಾಗಿದೆ ಎಂದು ಹೇಳಲಾಗಿದೆ. ಈ ಕಂಪನಿಯಿಂದ ಫ್ಲಾಟ್ ಖರೀದಿಸಿ ವಂಚನೆಗೊಳಗಾದ ವೈದ್ಯ ಮತ್ತು ಇನ್ನೊಬ್ಬ ವ್ಯಕ್ತಿಯು ಗ್ರಾಹಕ ಆಯೋಗಕ್ಕೆ ದೂರು ನೀಡಿದ್ದರು. ದೂರುದಾರರು ಪ್ಲಾಟ್‌ಗೆ 34.80 ಲಕ್ಷ ರೂ. ಪಾವತಿಸಿದ್ದರು. ಹಣ ಪಾವತಿಸಿದ ಬಳಿಕ ಆ ಲೇಔಟ್‌ಗೆ ನಿಜವಾದ ಪರ್ಮಿಟ್ ಇಲ್ಲ ಎಂದು ತಿಳಿದುಬಂದಿದೆ. ಡೆವಲಪರ್‌ಗಳಿಗೆ ಹಣವನ್ನು ಹಿಂದಿರುಗಿಸಲು ಕೇಳಿದಾಗ, ಕಂಪನಿಯ ಎಂಡಿ ಕಾಂಚರ್ಲಾ ಸತೀಶ್ ಚಂದ್ರಗುಪ್ತ ಕೇವಲ 15 ಲಕ್ಷ ರೂ.ಗಳನ್ನು ಹಿಂದಿರುಗಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಇದಕ್ಕೆ ಉತ್ತರ ನೀಡಲು ತಮ್ಮ ವಕೀಲರ ಮೂಲಕ ಗ್ರಾಹಕ ವೇದಿಕೆಗೆ ಹಾಜರಾಗುವಂತೆ ಆಯೋಗ ತಿಳಿಸಿದೆ.

(ಏಜೆನ್ಸೀಸ್)

ಏಪ್ರಿಲ್ 2025 ರ ಆರಂಭದಲ್ಲಿ, ಸಾಯಿ ಸೂರ್ಯ ಡೆವಲಪರ್ಸ್ ಮತ್ತು ಸುರಾನಾ ಗ್ರೂಪ್ ಒಳಗೊಂಡ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ (ED) ಮಹೇಶ್ ಬಾಬು ಅವರಿಗೆ ಸಮನ್ಸ್ ಮಾಡಿತ್ತು. ED ಮೂಲಗಳ ಪ್ರಕಾರ, ಮಹೇಶ್ ಬಾಬು ಮೇಲೆ ತಿಳಿಸಿದ ಸಂಸ್ಥೆಗಳು ಪ್ರಾರಂಭಿಸಿದ ರಿಯಲ್ ಎಸ್ಟೇಟ್ ಯೋಜನೆಗಳ ಪ್ರಚಾರ ಜಾಹೀರಾತುಗಳಲ್ಲಿ ಕೆಲಸ ಮಾಡಿದ್ದರು. ಹಾಗಾಗಿ ಈ ನಟನಿಗೆ ಒಟ್ಟು 5.9 ಕೋಟಿ ರೂ. ಸಂಭಾವನೆ ಸಿಕ್ಕಿದೆ ಎಂದು ಹೇಳಲಾಗಿದ್ದು, ಅದರಲ್ಲಿ 3.4 ಕೋಟಿ ರೂ. ಚೆಕ್ ಮೂಲಕ ಮತ್ತು 2.5 ಕೋಟಿ ರೂ. ನಗದು ರೂಪದಲ್ಲಿ ಪಾವತಿಸಲಾಗಿದೆ. ಈ ವಹಿವಾಟಿನ ನಗದು ಅಂಶವು ಏಜೆನ್ಸಿಯ ಪರಿಶೀಲನೆಗೆ ಒಳಪಟ್ಟಿದೆ. ಹಾಗಾಗಿ ಏಪ್ರಿಲ್ 28 ರಂದು ED ಮುಂದೆ ಹಾಜರಾಗಲು ಮಹೇಶ್ ಬಾಬು ಅವರನ್ನು ಕೇಳಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net